ಸೋಮವಾರಪೇಟೆ,ಜ.7: ಸಮೀಪದ ಐಗೂರು ಗ್ರಾಮದಲ್ಲಿ ಭತ್ತದ ಗದ್ದೆಗೆ ಮೂರು ಕಾಡಾನೆಗಳು ಧಾಳಿ ನಡೆಸಿ ಸುಮಾರು 1.5 ಏಕರೆ ಗದ್ದೆಯಲ್ಲಿ ಬೆಳೆದಿದ್ದ ಭತ್ತದ ಫಸಲನ್ನು ನಾಶ ಮಾಡಿವೆ.

ಕೆ.ಪಿ. ದಿನೇಶ್ ಎಂಬವರ ಗದ್ದೆಗೆ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಮೂರು ಕಾಡಾನೆಗಳು ಲಗ್ಗೆಯಿಟ್ಟಿದ್ದು ಭತ್ತದ ಪೈರನ್ನು ತುಳಿದು ನಷ್ಟಪಡಿಸಿವೆ. ಈ ಸಂದರ್ಭ ದಿನೇಶ್ ಅವರು ಪಟಾಕಿ ಸಿಡಿಸಿ ಕಾಡಾನೆಗಳನ್ನು ಅಟ್ಟಲು ಪ್ರಯತ್ನಿಸಿದರೂ ಯಾವದೇ ಪ್ರಯೋಜನವಾಗಿಲ್ಲ.

ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ ಮೇರೆ, ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಟಾರ್ಚ್ ಲೈಟ್ ಹರಿಸಿ, ಪಟಾಕಿ ಸಿಡಿಸುವ ಮೂಲಕ ಅರಣ್ಯಕ್ಕೆ ಅಟ್ಟಿದರು. ಈಗಾಗಲೇ ಕಾಡಿನಲ್ಲಿ ಆನೆಗಳಿಗೆ ಕುಡಿಯಲು ನೀರಿನ ಸವiಸ್ಯೆ ಹೆಚ್ಚುತ್ತಿದ್ದು, ಆಹಾರದ ಕೊರತೆಯೂ ಇರುವದರಿಂದ ಕಾಡಾನೆಗಳು ನಾಡಿನತ್ತ ದಾವಿಸುತ್ತಿದೆ. ಅರಣ್ಯ ಇಲಾಖೆಯವರು ಕಾಡಾನೆಗಳಿಗೆ ಅರಣ್ಯದಲ್ಲಿಯೇ ಆಹಾರ ಒದಗಿಸಲು ಮುಂದಾಗಬೇಕು ಎಂದು ದಿನೇಶ್ ಅಭಿಪ್ರಾಯಿಸಿದ್ದಾರೆ. ಹೆಚ್ಚಿನ ಮಳೆಯ ಅನಾಹುತದ ನಡುವೆಯೂ ಎರಡನೇ ಬಾರಿಗೆ ಬಿತ್ತಿದ್ದ ಫಸಲು ಇದೀಗ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಸುಮಾರು 15 ಕ್ವಿಂಟಾಲ್‍ನಷ್ಟು ಭತ್ತದ ಫಸಲು ನಷ್ಟವಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದು ದಿನೇಶ್ ತಿಳಿಸಿದ್ದಾರೆ.