ಮಡಿಕೇರಿ, ಜ. 7: ಭಾರತ ಸರಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಸುರಕ್ಷಾ ಕಾರ್ಯಕ್ರಮದಡಿಯಲ್ಲಿ, ಜಿಲ್ಲೆಯ 35 ಸಾವಿರಕ್ಕೂ ಅಧಿಕ ಕುಟುಂಬಗಳ ಅಂದಾಜು ಲಕ್ಷಕ್ಕೂ ಹೆಚ್ಚಿನ ಮಂದಿಗೆ ‘ಆಯುಷ್ಮಾನ್ ಭಾರತ್’ ಸೌಲಭ್ಯ ಲಭಿಸಿದೆ. ಬಡತನ ರೇಖೆಯಲ್ಲಿ ಪಡಿತರ ಸೌಲಭ್ಯ ಪಡೆಯುತ್ತಿರುವ ಕುಟುಂಬಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮನೆ ಬಾಗಿಲಿಗೆ ಈ ಸೌಲಭ್ಯ ಕಲ್ಪಿಸಿದ್ದಾರೆ.

ಅಲ್ಲದೆ ಆಯುಷ್ಮಾನ್ ಭಾರತ್ ಕಾರ್ಯಕ್ರಮದಡಿಯಲ್ಲಿ ಈ ಸೌಲಭ್ಯ ಹೊಂದಿಕೊಳ್ಳಲು; ಈಗಾಗಲೇ ಅಂಚೆ ಮೂಲಕ ಕೊಡಗಿನಲ್ಲಿ 35485 ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೌಲಭ್ಯ ಪತ್ರ ರವಾನಿಸಿದ್ದಾರೆ. ಅಂಚೆಯಲ್ಲಿ ಸ್ಪೀಡ್‍ಪೋಸ್ಟ್ (ವೇಗದ ಬಟವಾಡೆ) ಮುಖಾಂತರ ಅಷ್ಟು ಕುಟುಂಬಗಳಿಗೆ ಯೋಜನೆ ತಲಪುವಂತಾಗಿದೆ.

ಈ ಪ್ರಕಾರ ಪ್ರತಿ ಕುಟುಂಬದಲ್ಲಿರುವ ಎಲ್ಲ ಸದಸ್ಯರು ಈ ಯೋಜನೆಗೆ ಅರ್ಹರಾಗಿದ್ದಾರೆ. ಬಡತನ ರೇಖೆಯಡಿ ಆರೋಗ್ಯ ಇಲಾಖೆಯಿಂದ ಯಾವದೇ ಕಾಯಿಲೆಗಳಿಗೆ ರೂ. 5ಲಕ್ಷ ತನಕ ಕೇಂದ್ರ ಸರಕಾರವೇ ಚಿಕಿತ್ಸಾ ವೆಚ್ಚ ಭರಿಸಲಿದ್ದು, ಬಡತನ ರೇಖೆಯಿಂದ ಹೊರತಾಗಿರುವ ಎಲ್ಲ ಕುಟುಂಬಗಳಿಗೂ ಕೂಡ ರೂ. 1.50 ಲಕ್ಷದ ತನಕ ಆಯುಷ್ಮಾನ್ ಭಾರತ್ ಯೋಜನೆಯಡಿ ಯಾವದೇ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ.

ಬಡತನ ರೇಖೆಯಡಿ ಆರೋಗ್ಯ ಇಲಾಖೆಯಿಂದ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಈ ಸೌಲಭ್ಯ ಲಭಿಸಲಿದ್ದು, ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಉಪಕೇಂದ್ರಗಳಲ್ಲಿ ಹೆಲ್ತ್‍ಕಾರ್ಡ್‍ಗಾಗಿ ಹೆಸರನ್ನು ನೋಂದಾಯಿಸಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ. ಆ ಬೆನ್ನಲ್ಲೇ ಅಂಚೆ ಮೂಲಕ ಈ ಸೌಲಭ್ಯ ಪಡೆದಿರುವ ಕುಟುಂಬಗಳ ಪ್ರತಿಯೊಬ್ಬರು, ಪ್ರಧಾನಿ ಕಾರ್ಯಾಲಯದಿಂದ ರವಾನೆಯಾಗಿರುವ ಪತ್ರಗಳನ್ನು ತೋರಿಸಿ, ಚಿಕಿತ್ಸಾ ಸೌಲಭ್ಯ ಹೊಂದಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಅಂಚೆ ಮೂಲಕ ರವಾನೆಯಾಗಿರುವ ‘ಆಯುಷ್ಮಾನ್ ಭಾರತ್’ ಯೋಜನೆ ಪತ್ರಗಳನ್ನು ಸುಲಭವಾಗಿ ರವಾನಿಸಲು ಸಾಧ್ಯವಾಗಿದ್ದು, ಸಂಬಂಧಿಸಿದ ಕುಟುಂಬದ ಯಾರಾದರೂ ಸದಸ್ಯರು ಹೊಂದಿಕೊಳ್ಳಲು ಅವಕಾಶವಿರುವ ಹಿನ್ನೆಲೆ ಅಂಚೆ ಸಿಬ್ಬಂದಿಗೆ ಈ ಪತ್ರಗಳನ್ನು ಫಲಾನುಭವಿಗಳಿಗೆ ತಲಪಿಸಲು ಸುಲಭ ಸಾಧ್ಯವೆಂದು ಜಿಲ್ಲಾ ಅಂಚೆ ಅಧೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.