ಸೋಮವಾರಪೇಟೆ,ಜ.8: ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ಕರೆ ನೀಡಿದ್ದ ಬಂದ್ ಮತ್ತು ಮುಷ್ಕರಕ್ಕೆ ಸೋಮವಾರಪೇಟೆಯಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಜನಜೀವನ ಎಂದಿನಂತೆ ನಡೆದರೆ, ಕಾರ್ಮಿಕ ಸಂಘಟನೆ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ಸಭೆ ನಡೆಯಿತು.ದೇಶಾದ್ಯಂತ ಬೆಲೆ ಏರಿಕೆ ಅಧಿಕವಾಗಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನಸಾಮಾನ್ಯರ ಬದುಕನ್ನು ದುಸ್ಥಿತಿಗೆ ತಂದಿದೆ. ದಿನನಿತ್ಯದ ವಸ್ತುಗಳ ಬೆಲೆಯನ್ನು ಏರಿಸುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಇಲ್ಲಿನ ತಾಲೂಕು ಪಂಚಾಯಿತಿಯಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಮಿಕ ಸಂಘಟನೆಯ ಸದಸ್ಯರು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ನಂತರ ಇಲ್ಲಿನ ಜೇಸೀ ವೇದಿಕೆಯಲ್ಲಿ ಪ್ರತಿಭಟನಾ ಸಭೆ ನಡೆಸಿದರು.ಸಭೆಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ಕೇಂದ್ರ ಸರಕಾರÀ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಮುಷ್ಕರಕ್ಕೆ ಪ್ರಸ್ತಾಪಿಸಲಾಗಿರುವ ಬೇಡಿಕೆಗಳು ವಿಮಾ ನೌಕರರೂ ಸೇರಿದಂತೆ ದುಡಿಯುವ ಜನರ ಎಲ್ಲಾ ವರ್ಗಗಳಿಗೂ ಪ್ರಸ್ತುತವಾಗಿವೆ ಎಂದರು.

ದೇಶದಲ್ಲಿ ದುಡಿಯುವ ವರ್ಗದ ಮೇಲೆ ಶೋಷಣೆ ನಡೆಯುತ್ತಿದೆ. ಕಾರ್ಮಿಕರಿಗೆ ಮಾಸಿಕ ವೇತನ ಸಮರ್ಪಕವಾಗಿಲ್ಲ. ಬೆಲೆ ಏರಿಕೆಗೆ ಕಡಿವಾಣ ಬಿದ್ದಿಲ್ಲ. ಚುನಾವಣೆ ಸಂದರ್ಭ ಮೋದಿ ನೀಡಿದ್ದ ಭರವಸೆಗಳು ಈಡೇರಿಲ್ಲ. ದೇಶದಲ್ಲಿ ಅಚ್ಚೇದಿನ್ ಬಂದಿಲ್ಲ. ಸರ್ಕಾರಕ್ಕೆ ಇಂಧನ ಬೆಲೆ ಇಳಿಸುವ ಇಚ್ಛಾಶಕ್ತಿಯಿಲ್ಲ. ಉದ್ಯೋಗ ಸೃಷ್ಟಿಯ ಭರವಸೆಯೂ ಹುಸಿಯಾಗಿದೆ ಎಂದು ಭರತ್ ಆರೋಪಿಸಿದರು.

ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಮಹಿಳಾ ನೌಕರರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರೂ ಮಹಿಳಾ ಅಧಿಕಾರಿಗಳು, ಸಚಿವರು ಈ ಬಗ್ಗೆ ಗಮನಹರಿಸುತ್ತಿಲ್ಲ. ಮತಬ್ಯಾಂಕ್‍ಗಾಗಿ ಮಾತ್ರ ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅಂಗನವಾಡಿ ನೌಕರರ ಸಂಘದ ಭಾಗೀರಥಿ ಆರೋಪಿಸಿದರು.

ಸಭೆಯಲ್ಲಿ ಅಂಗನವಾಡಿ ನೌಕರರ ರಾಜ್ಯ ಸಮಿತಿ ಸದಸ್ಯೆ ಶಾರದ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ನಾಗಮ್ಮ, ಗ್ರಂಥಾಲಯ ಮೇಲ್ವಿಚಾರಕ ಸಂಘದ ಅಧ್ಯಕ್ಷ ಚೇತನ್, ಪ್ರಮುಖರಾದ ಭಾಗ್ಯವತಿ, ಕಾವೇರಮ್ಮ, ಜಮುನ, ಸಾವಿತ್ರಿ, ಚಂದ್ರಲೇಖಾ, ಫಿಲೋಮಿನಾ, ವಿ.ಕೃಷ್ಣ, ಅಣ್ಣಪ್ಪ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆ ಯರು, ಬಿಸಿಯೂಟ ನೌಕರರು, ಗ್ರಂಥಾಲಯ, ಗ್ರಾ.ಪಂ. ಗುತ್ತಿಗೆ ನೌಕರರು, ಬಿಎಸ್‍ಎನ್‍ಎಸ್ ಸಿಬ್ಬಂದಿಗಳು ಸೇರಿದಂತೆ ಕಾರ್ಮಿಕ ಸಂಘಟನೆಯ ಸದಸ್ಯರುಗಳು ಭಾಗವಹಿಸಿದ್ದರು.

ಬಂದ್‍ಗಿಲ್ಲ ಸ್ಪಂದನೆ: ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬಂದ್, ಪಟ್ಟಣದಲ್ಲಿ ಯಶಸ್ವಿಯಾಗಲಿಲ್ಲ. ಸರ್ಕಾರಿ ಬಸ್‍ಗಳನ್ನು ಹೊರತು ಪಡಿಸಿದರೆ ಖಾಸಗಿ ಬಸ್, ಆಟೋ, ಖಾಸಗಿ ವಾಹನಗಳ ಓಡಾಟ ಎಂದಿನಂತೆ ನಡೆಯಿತು.

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಜನಜೀವನ ಎಂದಿನಂತೆ ಸಾಗಿತು. ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಲ್ಲಿ ಪಾಠ ಪ್ರವಚನ ನಡೆಯಿತು. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.