ಶನಿವಾರಸಂತೆ, ಜ. 7: ‘ಪರೋಪಕಾರಾರ್ಥಂ ಇದಂ ಶರೀರಂ’ ಎಂಬಂತೆ ಸಮಾಜದಲ್ಲಿ ಪರರ ಉಪಕಾರಕ್ಕಾಗಿ ಶರೀರವನ್ನು ಸಮರ್ಪಿಸಿದರೆ ಬದುಕಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಮುದ್ದಿನಕಟ್ಟೆ ಮಠಾಧೀಶ ಅಭಿನವಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಸಮೀಪದ ಹಂಡ್ಲಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಭಾರತಿ ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವಿತಾವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ ವ್ಯಕ್ತಿ ನಿತ್ಯ ಸ್ಮರಣೀಯನಾಗುತ್ತಾನೆ. ಜಾತಿ, ಧರ್ಮಕ್ಕಿಂತ ಭಾವನಾತ್ಮಕ ಸಂಬಂಧ ಮುಖ್ಯವಾಗುತ್ತದೆ. ಶಿಬಿರದಲ್ಲಿ ಪಾಲ್ಗೊಳ್ಳುವದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಶಿಸ್ತು, ಸಂಯಮ, ಸಮಯಪ್ರಜ್ಞೆ, ಸ್ವಚ್ಛತೆ, ಸರಳ ಜೀವನದ ಪರಿಚಯವಾಗಿ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಬಾಳಲು ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾದ ಪ್ರಾಂಶುಪಾಲ ಈ.ಎಂ. ದಯಾನಂದ್, ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟರಾಜು, ತಾಲೂಕು ಪಂಚಾಯಿತಿ ಸದಸ್ಯ ಕುಶಾಲಪ್ಪ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷ ಎ.ಎಂ. ಆನಂದ್ ಮಾತನಾಡಿ, ವಿದ್ಯಾರ್ಥಿಗಳು ಎನ್ಎಸ್ಎಸ್ ಶಿಬಿರದಲ್ಲಿ ಪಾಲ್ಗೊಳ್ಳುವದರಿಂದ ಗ್ರಾಮೀಣ ಪ್ರದೇಶದ ಸರಳ ಜೀವನದ ಪರಿಚಯವಾಗುತ್ತದೆ. ನಾಯಕತ್ವದ ಗುಣ, ಸಹಬಾಳ್ವೆ, ಸಹಕಾರ ಮನೋಭಾವ ಮೈಗೂಡುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿ ಡಿ.ಎಸ್. ಮಧುಕುಮಾರ್, ಶಿಬಿರಾಧಿಕಾರಿ ಎಚ್.ಎಂ. ವಿವೇಕ್, ಸಹನಿರ್ದೇಶಕಿ ಎಸ್.ಪಿ. ಶಾಲಿನಿ, ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು.