ಮಡಿಕೇರಿ, ಜ. 8: ಈಚೆಗೆ ವೀರಾಜಪೇಟೆಯ ವಸತಿಗೃಹವೊಂದರಲ್ಲಿ ತಂಗಿದ್ದರೆನ್ನಲಾದ ಕೇರಳದ ಮಹಿಳೆಯರಿಬ್ಬರು ಬಳಿಕ ಶಬರಿಮಲೆ ಕ್ಷೇತ್ರ ಸಂದರ್ಶಿಸಿರುವ ಪ್ರಕರಣದಲ್ಲಿ ಕೊಡಗು ಜಿಲ್ಲಾಧಿಕಾರಿ ಹಾಗೂ ಅವರ ಪತಿ ಕೇರಳದ ಪೊಲೀಸ್ ಅಧಿಕಾರಿಯ ಕೈವಾಡವಿರುವದಾಗಿ ಅಪಪ್ರಚಾರ ನಡೆಸಿರುವ ಬಿಜೆಪಿ ಪ್ರಮುಖರೊಬ್ಬರ ವಿರುದ್ಧ ಪೊಲೀಸ್ ಮೊಕದ್ದಮೆ ದಾಖಲಾಗಿದೆ.ಮೇಲಿನ ಶಬರಿಮಲೆ ಪ್ರಕರಣ ಖಂಡಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಕುಶಾಲನಗರದಲ್ಲಿ ಪ್ರತಿಭಟಿಸಿದ ವೇಳೆ, ಸೋಮವಾರಪೇಟೆ ತಾಲೂಕು ಬಿಜೆಪಿ ಕಾರ್ಯದರ್ಶಿಯಾಗಿರುವ ವರದರಾಜ್ ಎಂಬವರು; ಮಹಿಳೆಯರು ಶಬರಿಮಲೆ ಪ್ರವೇಶಿಸಲು ಜಿಲ್ಲಾಧಿಕಾರಿ ಮತ್ತು ಅವರ ಪತಿ ಪಿತೂರಿ ನಡೆಸಿರುವದಾಗಿ ತಾ. 4 ರಂದು ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ಭಾಷಣ ಮಾಡಿದ್ದರು.ಆ ಮುಖಾಂತರ ತಮ್ಮ ಹಾಗೂ ಕೇರಳದ ಪತ್ತಣಂತಿಟ್ಟ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿರುವ ಪತಿ ಟಿ. ನಾರಾಯಣ್‍ರವರ ತೇಜೋವಧೆ ಮಾಡಿರುವದಾಗಿ ಸ್ವತಃ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ದೂರು ದಾಖಲಿಸಿದ್ದಾರೆ. ಆ ಮೇರೆಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.