ಮಡಿಕೇರಿ, ಜ.8 : ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಮದುವೆಯನ್ನು ಪ್ರಶ್ನಿಸಿ ಟೀಕೆ ಮಾಡಿದ್ದಾರೆನ್ನಲಾದ ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ತಾ.10ರಂದು ಮಡಿಕೇರಿಯಲ್ಲಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮಡಿಕೇರಿಯ ಎಂ.ಎಂ. ಮಸೀದಿಯ ಅಧ್ಯಕ್ಷ ಎಂ.ಎಂ.ಹಾರೂನ್ ಹಾಜಿ ಅವರು, ಕೋಮು ಸೌಹಾರ್ದತೆಗೆ ಹೆಸರಾದ ಭಾರತದಲ್ಲಿ ಇತ್ತೀಚೆಗೆ ಧರ್ಮ ನಿಂದನೆಯಂತಹ ಕೃತ್ಯಗಳು ಹೆಚ್ಚುತ್ತಿದ್ದು, ಆ ಮೂಲಕ ಅಶಾಂತಿ ಸೃಷ್ಟಿಸುವ ಪ್ರಯತ್ನವಾಗುತ್ತಿದೆ. ಇದು ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಸವಾಲಾಗಿದ್ದು, ಸಂವಿಧಾನ ಮತ್ತು ಶಾಂತಿ ಉಳಿಯಬೇಕಾದರೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಹೇಳಿದರು. ಯಾವದೇ ಧರ್ಮವನ್ನು ನಿಂದನೆ ಮಾಡುವದು ಅಕ್ಷಮ್ಯವಾಗಿದ್ದರೂ, ಕೆಲವರು ಪರೋಕ್ಷ ಲಾಭಕ್ಕಾಗಿ ಧರ್ಮ ನಿಂದನೆಯಲ್ಲಿ ತೊಡಗಿದ್ದಾರೆ. ಅಂತಹವರನ್ನು ಗುರುತಿಸಿ ಶಿಕ್ಷೆಗೆ ಗುರಿಪಡಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ತಡೆಯಬೇಕಾಗಿದೆ ಎಂದರು. ತಾ.10ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಎ.ವಿ.ಶಾಲೆಯ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಿಲ್ಲೆಯ ಎಲ್ಲಾ ಜಮಾಅತ್‍ಗಳ ಹಾಗೂ ಸಂಘಸಂಸ್ಥೆಗಳ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವದಾಗಿ ತಿಳಿಸಿದರು.

ಒಕ್ಕೂಟದ ಕುಶಾಲನಗರ ವಿಭಾಗದ ಅಧ್ಯಕ್ಷ ಅಬ್ದುಲ್ ಕರೀಂ ಮಾತನಾಡಿ, ಮುಸ್ಲಿಂ ಮಾತ್ರವಲ್ಲದೆ ಯಾವದೇ ಧರ್ಮ ನಿಂದನೆಯನ್ನು ಸಹಿಸಲು ಸಾಧ್ಯವಿಲ್ಲ. ಆಯಾ ಧರ್ಮದವರಿಗೆ ಅವರ ಧರ್ಮವೇ ಶ್ರೇಷ್ಠವಾಗಿದ್ದು, ಧರ್ಮ ನಿಂದನೆ ಮೂಲಕ ಭಾವನೆಗಳನ್ನು ಕೆರಳಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟ ಅಧ್ಯಕ್ಷ ಹಾಗೂ ಮಡಿಕೇರಿ ಬದ್ರಿಯಾ ಜಮಾಆತ್ ಅಧ್ಯಕ್ಷ ಯೂಸುಫ್ ಹಾಜಿ, ಮಡಿಕೇರಿ ಜಾಮಿಯಾ ಮಸೀದಿ ಅಧ್ಯಕ್ಷ ಎಂ.ಎ.ನಝೀರ್ ಹಾಜಿ ಹಾಗೂ ಮದೀನ ಮಸೀದಿ ಕಾರ್ಯದರ್ಶಿ ಮುಕ್ತಾರ್ ಹಾಜಿ ಉಪಸ್ಥಿತರಿದ್ದರು.