ಮಡಿಕೇರಿ, ಜ. 7: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದ ಹತ್ತು ಕೇಂದ್ರ ಕಾರ್ಮಿಕ ಸಂಘಟನೆಗಳಾದ ಐಎನ್‍ಟಿಯುಸಿ, ಎಐಟಿಯುಸಿ, ಹೆಚ್‍ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಐಸಿಸಿಟಿಯು, ಎಸ್‍ಇಡಬ್ಲ್ಯೂಎ, ಎಲ್‍ಪಿಎಫ್ ಹಾಗೂ ಯುಟಿಯುಸಿ ಸೇರಿದಂತೆ ಎಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ತಾ. 8ರಂದು (ಇಂದು) ಮತ್ತು ತಾ.9 (ನಾಳೆ) ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಬಂದ್ ಮುಷ್ಕರಕ್ಕೆ ಬೆಂಬಲವಾಗಿ ಕೊಡಗಿನಲ್ಲೂ ಎರಡು ದಿನ ಪ್ರತಿಭಟನೆಗಳು ನಡೆಯಲಿವೆ.ಕೊಡಗು ಜಿಲ್ಲೆಯಲ್ಲಿ ಯಾವದೇ ರೀತಿಯ ಬಂದ್ ನಡೆಯುವದಿಲ್ಲ. ಆದರೆ ತಾ.8ರಂದು (ಇಂದು) ಎಲ್ಲಾ ಕಾರ್ಮಿಕರು ಕೆಲಸಕ್ಕೆ ರಜೆ ಹಾಕಿ ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಮಡಿಕೇರಿಯಲ್ಲಿ ಗಾಂಧಿಪ್ರತಿಮೆ ಎದುರು ಪ್ರತಿಭಟನೆ ನಡೆಯಲಿದೆ. ವೀರಾಜಪೇಟೆಯಲ್ಲಿ ಮಾರಿಯಮ್ಮ ದೇವಾಲಯದ ಬಳಿಯಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ತೆರಳಿ ಧರಣಿ ಮಾಡಲಾಗುತ್ತದೆ. ಸೋಮವಾರಪೇಟೆಯಲ್ಲಿ ಕಾವೇರಿ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ತಾ.9ರಂದು (ನಾಳೆ) ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 11 ಗಂಟೆಗೆ ಎ.ವಿ. ಶಾಲೆ ಬಳಿಯಿಂದ ಗಾಂಧಿ ಮೈದಾನದವರೆಗೆ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಕಾರ್ಮಿಕ ನಾಯಕರುಗಳು

(ಮೊದಲ ಪುಟದಿಂದ) ಪ್ರತಿಭಟನೆಯ ಕುರಿತು ಮಾತನಾಡಲಿದ್ದಾರೆ ಎಂದು ಕೊಡಗು ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್, ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಹೆಚ್.ಬಿ. ರಮೇಶ್, ಸಿಐಟಿಯು ಅಧ್ಯಕ್ಷ ದುರ್ಗಾಪ್ರಸಾದ್ ಮಾಹಿತಿ ನೀಡಿದ್ದಾರೆ.

ಬೇಡಿಕೆಗಳೇನು?

*ಪೆಟ್ರೋಲ್- ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಬೇಕು.

*ಹೊಸ ಮತ್ತು ಸಭ್ಯ ಉದ್ಯೋಗಗಳನ್ನು ಸೃಷ್ಟಿಸಬೇಕು.

*ಕೇಂದ್ರ ಸರ್ಕಾರದ 7ನೇ ವೇತನ ಆಯೋಗದಂತೆ 18 ಸಾವಿರ ರೂ. ಕನಿಷ್ಟ ವೇತನ ಜಾರಿಮಾಡಬೇಕು.

*ಕಾರ್ಮಿಕ ಕಾನೂನುಗಳನ್ನು ಮಾಲೀಕರು ಮತ್ತು ಬಂಡವಾಳಗಾರರ ಪರವಾಗಿ ತಿದ್ದುಪಡಿ ಮಾಡುವದನ್ನು ನಿಲ್ಲಿಸಬೇಕು.

*ಅಂಗನವಾಡಿ, ಬಿಸಿಯೂಟ, ಆಶಾ, ಎನ್‍ಆರ್‍ಹೆಚ್‍ಎಂ, ಎನ್‍ಹೆಚ್‍ಎಂ, ಎಸ್‍ಎಸ್‍ಎ ಮುಂತಾದ ಸ್ಕೀಮುಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಿ ಕನಿಷ್ಟ ವೇತನ ಮತ್ತು ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು.

*ದೇಶದ ಎಲ್ಲಾ ಕಾರ್ಮಿಕರಿಗೂ ಸಾರ್ವತ್ರಿಕ ಸಾಮಾಜಿಕ ರಕ್ಷಣೆ ಒದಗಿಸಬೇಕು.