ಮಡಿಕೇರಿ, ಜ. 7: ನಟ್ಟಿರುಳಲಿ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದ ‘ಸ್ಟಾಂಡರ್ಡ್ ಕಳ್ಳರು’ ಹೆದ್ದಾರಿ ಬದಿಯಲ್ಲಿರುವ ದೇವಸ್ಥಾನಕ್ಕೆ ನುಗ್ಗಿ ಕಳವಿಗೆ ಯತ್ನಿಸಿದ್ದಲ್ಲದೆ, ಮುಂದೆ ಸಾಗಿ ರಸ್ತೆ ಬದಿ ಇರುವ ಅಂಗಡಿ ಯಿಂದ ಹಣ ಲಪಟಾಯಿಸಿ, ರಸ್ತೆ ಬದಿ ನಿಲ್ಲಿಸಲಾಗಿದ್ದ ಕಾರೊಂದರ ನಾಲ್ಕು ಚಕ್ರಗಳನ್ನು ಕಳಚಿ ಕಳವು ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.ಮಡಿಕೇರಿ - ಮಂಗಳೂರು ರಾಜ್ಯ ಹೆದ್ದಾರಿಯಲ್ಲಿ ಬರುವ ದೇವರಕೊಲ್ಲಿಯಲ್ಲಿರುವ ಶ್ರೀ ಚಾಮುಂಡೇಶ್ವರಿ

(ಮೊದಲ ಪುಟದಿಂದ) ದೇವಾಲಯಕ್ಕೆ ನಿನ್ನೆ ರಾತ್ರಿ ಕನ್ನ ಹಾಕಲಾಗಿದೆ. ನಡುರಾತ್ರಿ ಕಳೆದು 3.30ರ ಸಮಯದಲ್ಲಿ ಈ ಘಟನೆ ನಡೆದಿದ್ದು, ದೇಗುಲದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.ಕೈಯಲ್ಲಿ ಉದ್ದದ ಕತ್ತಿ ಹಿಡಿದಿರುವಂತೆ ಕಾಣುವ, ಕೆಂಪು ಜಾಕೆಟ್, ಜೀನ್ ಪ್ಯಾಂಟ್ ಹಾಕಿರುವ ಯುವಕನೋರ್ವ ದೇವಾಲಯದ ಒಳಹೊಕ್ಕು ತಡಕಾಡುವದು ಕಾಣುತ್ತದೆ. ಮತ್ತೋರ್ವ ಹೊರಗಡೆ ನಿಂತಿರುವಂತೆ ಕಾಣುತ್ತದೆ. ನಂತರ ಏನೂ ಸಿಗದಿದ್ದಾಗ ಹೊರಬಂದು ಕಾರಿನಲ್ಲಿ ಪರಾರಿಯಾಗುವದು ಕಾಣುತ್ತದೆ.ಅಂಗಡಿಯಿಂದ ದರೋಡೆಇತ್ತ ಜೋಡುಪಾಲ ಬಳಿ ರಸ್ತೆ ಬದಿ ಇರುವ ಅಂಗಡಿಯೊಂದಕ್ಕೆ ನುಗ್ಗಿರುವ ಕಳ್ಳರು ಅಂಗಡಿಯಲ್ಲಿದ್ದ ರೂ. 1,500 ಹಣವನ್ನು ಲಪಟಾಯಿಸಿದ್ದಾರೆ. ಮತ್ತೊಂದು ಅಂಗಡಿಯಲ್ಲೂ ಜಾಲಾಡಿದ್ದಾರೆ. ಅಲ್ಲದೆ ರಸ್ತೆ ಬದಿ ನಿಲ್ಲಿಸಿದ್ದ ಕಾರೊಂದರ ನಾಲ್ಕು ಚಕ್ರಗಳನ್ನು ಕಳಚಿ ಕದ್ದೊಯ್ದಿದ್ದಾರೆ. ದೇವಾಲಯಕ್ಕೆ ಕನ್ನ ಹಾಕಿದವರೇ ಅಂಗಡಿಗೆ ನುಗ್ಗಿ, ಕಾರಿನ ಚಕ್ರ ಕಳವು ಮಾಡಿರಬಹುದೆಂದು ಗ್ರಾಮಸ್ಥರು ಶಂಕಿಸಿದ್ದಾರೆ. ರಸ್ತೆ ಬದಿಯಲ್ಲಿರುವ ಅದರಲ್ಲೂ ದೇವಾಲಯದ ಒಳಗಡೆ ವಿದ್ಯುತ್ ದೀಪಗಳು ಉರಿಯುತ್ತಿದ್ದರೂ ಅದರೊಳಗೆ ನುಗ್ಗಿರುವ ಕಳ್ಳರ ಧೈರ್ಯದ ಬಗ್ಗೆ ಅಚ್ಚರಿ ವ್ಯಕ್ತಗೊಂಡಿದೆ. ಈ ಬಗ್ಗೆ ದೊರೆತ ಪುಕಾರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

- ಸಂತೋಷ್