ನಾಪೋಕ್ಲು, ಜ. 6: ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕಾಡು ಗ್ರಾಮದ ಶ್ರೀ ಭಗವತಿ ದೇವಾಲಯದ ಸಮೀಪ, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಸುಮಾರು ರೂ. 55 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಶ್ರೀ ಭಗವತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಶಾಸಕ ಬೋಪಯ್ಯ, ಕೊಡಗಿನಲ್ಲಾದ ಪ್ರಕೃತಿ ದುರಂತದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎನ್‍ಡಿಆರ್‍ಎಫ್À ಮೂಲಕ ಮೊದಲ ಹಂತವಾಗಿ ರೂ. 220 ಕೋಟಿ ಬಿಡುಗಡೆ ಮಾಡಿದ್ದು, ಈ ಪೈಕಿ ರಾಜ್ಯ ಸರ್ಕಾರವು 115 ಕೋಟಿಯನ್ನು ಜಿಲ್ಲೆಗೆ ನೀಡಿದೆ ಎಂದರು.

ಗ್ರಾಮೀಣಾಭಿವೃದ್ಧಿಗೆ 33 ಕೋಟಿ, ಲೋಕೋಪಯೋಗಿ ಇಲಾಖೆಗೆ 44, ವಿದ್ಯುತ್ ನಿಗಮಕ್ಕೆ 2.5 ಕೋಟಿ ಮತ್ತು ಇತರ ಇಲಾಖೆಗಳಿಗೆ 1 ಕೋಟಿ ನೀಡಲಾಗಿದೆ. ಅತಿವೃಷ್ಟಿ ಅನಾವೃಷ್ಟಿಗೆ ಸಂಬಂಧಿಸಿದಂತೆ ಸಮಿತಿಗೆ ಶಾಸಕರೇ ಅಧ್ಯಕ್ಷರಾಗಿರುವದರಿಂದ, ಈ ಬಗ್ಗೆ ಸಭೆ ನಡೆಸಿ, ಅನುದಾನವನ್ನು ಆದ್ಯತೆ ಮೇರೆಗೆ ರಸ್ತೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

ಕೈಕಾಡು-ಪಾರಾಣೆ ರಸ್ತೆಗೆ ಕಾಯಕಲ್ಪ ಸಿಗಬೇಕಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಈ ರಸ್ತೆಗೆ ರೂ. 30 ಲಕ್ಷ ಮೀಸಲಿಟ್ಟು, ಕೊಡಗು ಪ್ಯಾಕೇಜಿನಡಿ ಸಣ್ಣಸಣ್ಣ ರಸ್ತೆಗಳಿಗೆ ಇದ್ದ ಅನುದಾನವನ್ನು ಬದಲಿಸಿ, ಇದೇ ರಸ್ತೆಗೆ ರೂ. 15 ಕೋಟಿ ಇಡಲಾಗಿದೆ. ಕಾಮಗಾರಿಗೆ ಟೆಂಡರ್ ಆಗಬೇಕಿದ್ದು, ಕೈಕಾಡು ಮಾರ್ಗ ಸುಸಜ್ಜಿತ ರಸ್ತೆಯಾಗಿ ಬದಲಾಗಲಿದೆ ಎಂದು ಬೋಪಯ್ಯ ಹೇಳಿದರು.

ಭಗವತಿ ದೇಗುಲದ ಅರ್ಚಕ ರಾಘವೇಂದ್ರ ಭಟ್ ಪೂಜಾ ವಿಧಿಗಳನ್ನು ನಡೆಸಿದರು. ಈ ವೇಳೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಸದಸ್ಯೆ ಉಮಾ ಪ್ರಭು, ಚೆಯ್ಯಂಡಾಣೆ ಗ್ರಾಮ ಪಂಚಾಯಿತಿ ಸದಸ್ಯ ಕೋಡೀರ ಪ್ರಸನ್ನ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಬಿದ್ದಂಡ ಉಷಾ ದೇವಮ್ಮ, ಆರ್‍ಎಂಸಿ ಮಾಜಿ ಸದಸ್ಯ ಬೊಳ್ಳಚೆಟ್ಟಿರ ಪ್ರಕಾಶ್, ಗ್ರಾಮಸ್ಥರು ಹಾಜರಿದ್ದರು. - ದುಗ್ಗಳ