ಮಡಿಕೇರಿ, ಜ. 6: ಪೋಷಕರು ತಮ್ಮ ಮಕ್ಕಳ ಬದುಕಿಗೆ ಅವಶ್ಯವಿರುವ ವಿದ್ಯೆಯೊಂದಿಗೆ, ಯೋಗ, ಸಂಗೀತ, ನೃತ್ಯದಂತಹ ಶಾಸ್ತ್ರೀಯ ಕಲೆಗಳನ್ನು ಕಲಿಸುವ ಮೂಲಕ, ರಾಮಾಯಣ, ಮಹಾಭಾರತದಂತಹ ಗ್ರಂಥಗಳು ಹಾಗೂ ಪಂಚತಂತ್ರ ಕಥೆಗಳನ್ನು ಓದಿಸುವಂತೆ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಮುಖ್ಯಾಧಿಕಾರಿ ವಿದ್ಯಾ ಹರೀಶ್ ಕರೆ ನೀಡಿದರು. ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಸಮಾಜ ಬಾಂಧವರಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಇಲ್ಲಿನ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೇಲಿನ ಅಂಶಗಳನ್ನು ಉಲ್ಲೇಖಿಸಿದ ವಿದ್ಯಾ ಹರೀಶ್, ಒಳ್ಳೆಯದನ್ನು ಕಲಿಸಲು ಯಾವದೇ ಜಾತಿ, ಮತ, ಧರ್ಮಗಳನ್ನು ಸೀಮಿತಗೊಳಿಸದೆ ಮಕ್ಕಳಲ್ಲಿ ಉತ್ತಮ ಬದುಕಿಗೆ ಪ್ರೋತ್ಸಾಹಿಸಬೇಕೆಂದು ತಿಳಿ ಹೇಳಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮೌಲ್ಯಗಳನ್ನು ಮರೆತು ಕ್ಷಣಿಕ ಸುಖ ಅಥವಾ ರಂಜನೆಗೆ ಹಾತೊರೆಯುವ ನಾವು, ತಾಳ್ಮೆ ಕಳೆದುಕೊಂಡು ಗಡಿಬಿಡಿ ಹೆಜ್ಜೆ ಅನುಸರಿಸುವಂತಾಗಿದೆ ಎಂದು ವಿಷಾದಿಸಿದರು.
ಶಾಲೆಗಳಲ್ಲಿ ಮಕ್ಕಳಿಗೆ ಪ್ರಕೃತಿಯ ಬಗ್ಗೆ ಕಲಿಸುವಾಗಲೂ, ನೈಜವಾಗಿ ಬೀಜದಿಂದ ಟಿಸಿಲೊಡೆದ ಗಿಡದಿಂದ ಮರವಾಗುವ ಕುರಿತು ತಿಳಿಸದೆ, ಕೊಡಗಿನ ಪರಿಸರದ ಶಾಲೆಗಳಲ್ಲಿಯೂ; ಮರದ ಚಿತ್ರ ಬಿಡಿಸಿ ಪಾಠ ಮಾಡುವ ಪ್ರವೃತ್ತಿ ಕಾಣುವಂತಾಗಿದೆ ಎಂದು ಬೊಟ್ಟು ಮಾಡಿದರು. ಇಂತಹ ಕೃತಕ ಸೃಷ್ಟಿಯ ಬದಲಿಗೆ ನೈಜ ಸಂಗತಿಗಳನ್ನು ಕಲಿಸುವದರಿಂದ ಮಕ್ಕಳು ಆದರ್ಶ ಜೀವನ ಕಂಡುಕೊಳ್ಳುವದು ಸಾಧ್ಯವೆಂದು ಅವರು ನೆನಪಿಸಿದರು.
ಇಂತಹ ಸದಾಶಯದೊಂದಿಗೆ ಕೊಡಗು ವಿದ್ಯಾಲಯವನ್ನು ಮಾದರಿ ಶಾಲೆಯಾಗಿ ರೂಪಿಸಲು, ಪೋಷಕವರ್ಗ ಸಹಕರಿಸುವಂತೆ ವಿದ್ಯಾ ಹರೀಶ್ ಕರೆ ನೀಡಿದರು. ನಿತ್ಯ ಓಂಕಾರ ಮಂತ್ರದೊಂದಿಗೆ ನಿರೋಗಿಗಳಾಗಿ ಮಕ್ಕಳನ್ನು ಬೆಳೆಸುವದು ಸಾಧ್ಯವೆಂದು ಅವರು ಉದಾಹರಿಸಿದರು. ಆ ಮುಖಾಂತರ ಏಕಾಗ್ರತೆ ಹಾಗೂ ಕಲಿಕೆಯಲ್ಲಿ ಆಸಕ್ತಿ ಮೂಡಲಿದೆ ಎಂದು ಸಂದೇಶ ರವಾನಿಸಿದರು.
ಪ್ರತಿಭೆಗಳಿಗೆ ಪ್ರೋತ್ಸಾಹ : ಸಮಾಜದ ಸಾಧಕರು, ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಪ್ರೋತ್ಸಾಹದೊಂದಿಗೆ ಸನ್ಮಾನ ನೀಡಲಾಯಿತು. ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸಲಾಯಿತು. ಪುಟಾಣಿಗಳ ಸಹಿತ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ, ಬಹುಮಾನ ನೀಡಲಾಯಿತು. ಮಹಿಳೆಯರು ಹಾಗೂ ಪುರುಷರಿಗೂ ಸ್ಪರ್ಧೆಯೊಂದಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು. ನಿಧಿ ಅಧ್ಯಕ್ಷ ಎ. ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಬಿ.ಕೆ. ಅರುಣ್ ಸೋಮಯಾಜಿ, ಉಪಾಧ್ಯಕ್ಷ ಎಂ. ರಾಮಚಂದ್ರ ಹಾಗೂ ಪದಾಧಿಕಾರಿಗಳು, ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಗೀತಾ ಗಿರೀಶ್ ನಿರೂಪಣೆಯೊಂದಿಗೆ ಸವಿತಾ ಭಟ್, ಸುರೇಶ ಕಗ್ಗೋಡ್ಲು, ಕವಿತಾ ವಿ. ರಾಮ್ ಪ್ರಮುಖರನ್ನು ಪರಿಚಯಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಾಗಿ ಹಿರಿಯರಾದ ಹೆಚ್.ಎಸ್. ಚಂದ್ರಶೇಖರಯ್ಯ, ಭಾಗೀರಥಿ ಹುಲಿತಾಳ, ಹೆಚ್.ಆರ್. ದಾಮೋದರ್, ಗಿರೀಶ್ ಕಿಗ್ಗಾಲು, ಶ್ರೀದರ್ ಹೆಗಡೆ, ಜಿ.ಆರ್. ರವಿಶಂಕರ್, ಎನ್.ಕೆ. ಆಕಾಶ್, ಎಂ. ಸುಧೀರ್, ಗೌತಂ, ಗಾಯತ್ರಿ, ಮಾ|| ಆಯುಷ್ ಅವರುಗಳನ್ನು ಸನ್ಮಾನಿಸಲಾಯಿತು. ಸಾಧಕರು ತಮ್ಮ ಆಶಯ ನುಡಿಯಾಡಿದರೆ, 94ರ ಇಳಿವಯಸ್ಸಿನ ಚಂದ್ರಶೇಖರಯ್ಯ ಸರಸ್ವತಿ ಸ್ತುತಿಯ ಗಾಯನದಿಂದ ಗಮನ ಸೆಳೆದರು.
ನಿಧಿಯ ಮಾಜೀ ಅಧ್ಯಕ್ಷ ಶರತ್ ಕುಮಾರ್, ಡಾ. ರಾಜಾರಾಮ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.