ಶನಿವಾರಸಂತೆ, ಜ. 6: ಬಾಲ್ಯ ಘಟ್ಟದಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ ಮಗುವಿನ ಉಜ್ವಲ ಭವಿಷ್ಯಕ್ಕೆ ಉತ್ತಮ ಅಡಿಪಾಯವಾಗುತ್ತದೆ ಎಂದು ಎಸ್.ಐ. ಹೆಚ್.ಎಂ. ಮರಿಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಬ್ರೈಟ್ ಅಕಾಡೆಮಿಯ ಹೇಮಾ ವಿದ್ಯಾಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾ ಡಿದರು.
ಮುಗ್ಧ ಮಕ್ಕಳಲ್ಲಿ ತಾರತಮ್ಯ ತೋರದೆ ಕಲಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಪಠ್ಯ-ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ ಎಂದು ಅವರು ಕರೆ ನೀಡಿದರು.
ಲೇಖಕಿ ನಯನತಾರಾ ಮಾತನಾಡಿ, ವಿದ್ಯಾಸಂಸ್ಥೆಗಳ ಸ್ಥಾಪನೆ ಮುಖ್ಯವಲ್ಲ. ಪ್ರಗತಿ ಪಥದಲ್ಲಿ ಕೊಂಡೊಯ್ದು ಬೆಳೆಸುವದು ಮುಖ್ಯ. ವಿದ್ಯಾಸಂಸ್ಥೆಗಳ ಹೆಚ್ಚಳ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸುತ್ತದೆ. ಮನೆಯಲ್ಲಿ ಸಿಗುವ ಸಂಸ್ಕಾರದ ಜೊತೆಗೆ ವಿದ್ಯಾಸಂಸ್ಥೆಯಲ್ಲಿ ಕಲಿವ ಶಿಕ್ಷಣ ವ್ಯಕ್ತಿಯ ವ್ಯಕ್ತಿತ್ವಕ್ಕೆ ಪರಿಪೂರ್ಣತೆ ತಂದುಕೊಡುತ್ತದೆ. ಶಿಕ್ಷಕರ ಜೊತೆಯಲ್ಲಿ ಪೋಷಕರ ಪಾತ್ರವೂ ಮುಖ್ಯವಾಗಿದೆ ಎಂದರು.
ವಿಘ್ನೇಶ್ವರ ವಿದ್ಯಾಸಂಸ್ಥೆ ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಸರ್ವ ಜನಾಂಗದ ಶಾಂತಿಯ ತೋಟವಿದ್ದಂತೆ. ಶಿಕ್ಷಕರು ಆತ್ಮತೃಪ್ತಿಯಿಂದ ಕಲಿಸಿದರೆ ಮಕ್ಕಳಲ್ಲಿ ಭೌದ್ಧಿಕ ಚುರುಕುತನ ಕಂಡುಬರುತ್ತದೆ. ಮನೆಯ ಪರಿಸರ ಶುದ್ಧವಾಗಿದ್ದರೇ ಅಲ್ಲಿ ರಾಮಕೃಷ್ಣರ ಜನನವಾಗುತ್ತದೆ. ಅಶುದ್ಧವಾಗಿದ್ದರೆ ರಾವಣ-ದುರ್ಯೋಧನರ ಜನನವಾಗುತ್ತದೆ. ಸಂಸ್ಕಾರವಂತರ ಮನೆಯೇ ದೇವಾಲಯವಾಗಿದ್ದು, ಅಲ್ಲಿ ಜನಿಸುವ ಮಗು ಉತ್ತಮ ನಾಗರಿಕನಾಗಿ ಭವಿಷ್ಯ ರೂಪಿಸಿಕೊಳ್ಳುತ್ತದೆ ಎಂದರು.
ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು. ಪಠ್ಯ-ಪಠ್ಯೇತರ, ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಗಣ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಜೆ. ಪರಮೇಶ್ ಮಾತನಾಡಿ, ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಪೋಷಕರ ಸಹಕಾರ ಅತ್ಯಗತ್ಯವಾಗಿದೆ. ಎಲ್ಲರ ಸಹಕಾರ ಮಾರ್ಗದರ್ಶನ ದೊಂದಿಗೆ ಶಾಲೆಯಲ್ಲಿ ಉತ್ತಮ ಶಿಕ್ಷಕರ ಮೂಲಕ ಗುಣಾತ್ಮಕ ಶಿಕ್ಷಣ ನೀಡಲು ಆಡಳಿತ ಮಂಡಳಿ ಪ್ರಯತ್ನಿಸುತ್ತಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ರುಕ್ಮಿಣಿ, ನಿರ್ದೇಶಕಿ ಸೀತಮ್ಮ, ಸದಸ್ಯ ಎಸ್.ಎ. ಸಮೀರ್, ಮುಖ್ಯ ಶಿಕ್ಷಕಿ ಕವನಾ, ಶಿಕ್ಷಕಿ ಸ್ಪಂದನಾ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.