ಮಡಿಕೇರಿ, ಜ. 6: ಭಾರತದ ಹೆಮ್ಮೆಯ ಸೇನಾನಿ, ಕೊಡಗಿನ ಪುತ್ರ ಕೊಡಂದೇರ ಎಸ್. ತಿಮ್ಮಯ್ಯ ಅವರ ನಿವಾಸ ‘ಸನ್ನಿಸೈಡ್’ ಅನ್ನು ಸ್ಮಾರಕವನ್ನಾಗಿ ರೂಪಿಸುವ ಕೆಲಸಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಮೂರು ವರ್ಷಗಳೇ ಉರುಳುತ್ತಾ ಬಂದರೂ ಕಾಮಗಾರಿ ಕುಂಟುತ್ತಾ ಸಾಗತೊಡಗಿದೆ. ನಗರದ ಹೃದಯ ಭಾಗದಲ್ಲಿರುವ ಈ ವೀರ ಸೇನಾನಿಯ ನಿವಾಸವನ್ನು ಸ್ಮಾರಕವನ್ನಾಗಿ ರೂಪಿಸುವ ಯೋಜನೆ ಆರಂಭಗೊಂಡು ದಶಕವೇ ಕಳೆದು ಹೋಗಿದೆ.ಪ್ರಾರಂಭಿಕ ವರ್ಷಗಳಲ್ಲಿ ರಸ್ತೆ ಸಾರಿಗೆ ಪ್ರಾಧಿಕಾರ ಕಚೇರಿಯಿದ್ದ ಕಾರಣಕ್ಕಾಗಿ, ಈ ನಿವಾಸವನ್ನು ತೆರವುಗೊಳಿಸುವಲ್ಲಿ ಸಾಕಷ್ಟು ವರ್ಷಗಳೇ ಬೇಕಾಯಿತು. ಕೊನೆಗೂ 2016 ರಿಂದ ಕಾಮಗಾರಿಗೆ ವೇಗ ಲಭಿಸಿತ್ತು. ಸನ್ನಿಸೈಡ್ ಹಳೆಯ ಕಟ್ಟಡವನ್ನು ಯಥಾ ಸ್ಥಿತಿಯಲ್ಲಿ ನವೀಕರಿಸಲು ಕೋಟಿಗಟ್ಟಲೆ ಹಣ ವ್ಯಯಿಸಬೇಕಾಯಿತು. ಆ ಸಲುವಾಗಿ ಕರ್ನಾಟಕ ಸರಕಾರದಿಂದ ರೂ. 3 ಕೋಟಿಯ ಯೋಜನೆಯೊಂದಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಸನ್ನಿಸೈಡ್ ಕಟ್ಟಡದ ದುರಸ್ತಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. ಆ ಮುಖಾಂತರ ಕಟ್ಟಡದ ಮೂಲ ಸ್ವರೂಪವನ್ನು ಉಳಿಸಿಕೊಂಡು ಯಥಾ ಸ್ಥಿತಿಯಲ್ಲಿ ನವೀಕರಣಗೊಳಿಸುವದ ರೊಂದಿಗೆ, ಈಗಾಗಲೇ ಬಹುತೇಕ ತಡೆಗೋಡೆ ಸಹಿತ ಹೊರಾಂಗಣದಲ್ಲಿ ಸೈನಿಕ ಸ್ಮಾರಕ ಕೂಡ ನಿರ್ಮಿಸಿ ಸೈನ್ಯಾಧಿಕಾರಿಗಳಿಂದ ನೂತನ ಸ್ಮಾರಕದ ಉದ್ಘಾಟನೆಯೂ ನೆರವೇರಿದೆ.
ಕಲಾಕೃತಿಗಳು : ವೀರ ಸೇನಾನಿಯ ನಿವಾಸದ ಒಳಾಂಗಣ ದಲ್ಲಿ ಹಳೆಯ ಶೈಲಿಯ ಪೀಠೋಪಕರಣಗಳು, ಜನರಲ್ ತಿಮ್ಮಯ್ಯ ಅವರ ಬದುಕಿನ ಸಾಕ್ಷ್ಯಚಿತ್ರಗಳನ್ನು ಒಳಗೊಂಡ ಕಲಾಕೃತಿಗಳನ್ನು ತೈಲವರ್ಣದಿಂದ ರೂಪಿಸಲಾಗುತ್ತಿದೆ. ಇಂತಹ 60ಕ್ಕೂ ಅಧಿಕ ದೃಶ್ಯಾವಗಳಿಗಳನ್ನು ಸಿದ್ಧಗೊಳಿಸಲಾಗಿದೆ.
ಮಳಿಗೆ ಕಟ್ಟಡ: ಸ್ಮಾರಕ ಭವನದ ಪಕ್ಕದಲ್ಲಿ ವೀಕ್ಷಣೆಗೆ ಬರುವ ಪ್ರವಾಸಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕಟ್ಟಡ ಕೂಡ ತಲೆಯೆತ್ತಿದ್ದು, ಇಲ್ಲಿ ಶೌಚಾಲಯ, ಉಪಹಾರ ಗೃಹ ಇತ್ಯಾದಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಮಹಾದ್ವಾರ : ವಸ್ತು ಸಂಗ್ರಹಾಲಯವನ್ನು ಒಳಗೊಂಡ ಈ ಸ್ಮಾರಕಕ್ಕೆ ಪ್ರವೇಶ ದ್ವಾರ ಸಹಿತ ಇತರ ಕೆಲಸಗಳು
(ಮೊದಲ ಪುಟದಿಂದ) ಮುಂದುವರಿದಿವೆ. ಅಕ್ಕ ಪಕ್ಕ ಕಟ್ಟಡಗಳನ್ನು ಕೆಡವಿ, ಪ್ರವಾಸಿಗಳ ವಾಹನ ನಿಲುಗಡೆ ಸೇರಿದಂತೆ ಇತರ ಕಾಮಗಾರಿ ಇನ್ನಷ್ಟೇ ಆಗಬೇಕಿದೆ. ಆ ದಿಸೆಯಲ್ಲಿ ‘ಲಾನ್’ (ಹುಲ್ಲು) ಹಾಸುವಿಕೆ ಇತ್ಯಾದಿ ಹೊರಾಂಗಣದ ಕೆಲಸದೊಂದಿಗೆ ಪುಷ್ಪೋದ್ಯಾನದ ಯೋಜನೆ ರೂಪಿಸಿದ್ದು, ಈ ಎಲ್ಲಾ ಕಾಮಗಾರಿಗಳು ಇನ್ನಷ್ಟೇ ಆಗಬೇಕಿದೆ.
ಬಾವಿ ರಿಪೇರಿಗೆ ಹಿಂದೇಟು: ಇನ್ನು ‘ಸನ್ನಿಸೈಡ್’ ಅಂಗಳದಲ್ಲಿರುವ ಪುರಾತನ ಬಾವಿಯನ್ನು ಯಥಾ ಸ್ಥಿತಿಯಲ್ಲಿ ಉಳಿಸಿಕೊಂಡು ನವೀಕರಿಸಲು ಗಮನ ಹರಿಸಲಾಗಿದೆ. ಆದರೆ ಈ ಬಾವಿ ರಿಪೇರಿಗೆ ಲಕ್ಷ ಕೊಟ್ಟರೂ, ಕೆಲಸ ಮಾಡಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಕಾಮಗಾರಿ ಗುತ್ತಿಗೆದಾರರು ಪ್ರತಿಕ್ರಿಯಿಸಿದ್ದಾರೆ.
‘ಮಿಗ್’ ವಿಮಾನ: ಸದ್ಯವೇ ಈ ಸ್ಮಾರಕಕ್ಕೆ ವಾಯು ಸೇನೆಯ ಎಂಐಜಿ (ಮಿಗ್) ವಿಮಾನವೊಂದನ್ನು ಕೂಡ ತರುವ ಸುಳಿವಿದ್ದು, ಈಗಾಗಲೇ ಮಿಲಿಟರಿ ಟ್ಯಾಂಕರ್ ತಂದಿರಿಸಲಾಗಿದೆ. ಅಲ್ಲದೆ ಜಮ್‍ಷಡ್‍ಪುರ ಸೇನಾ ಶಿಬಿರದಿಂದ 45ಕ್ಕೂ ಅಧಿಕ ಸೇನಾ ಹಳೆಯ ಉಪಕರಣಗಳು ಈ ಸಂಗ್ರಹಾಲಯ ಸೇರಲಿದೆ.
ಇಷ್ಟೆಲ್ಲ ತಯಾರಿ ನಡುವೆ ಆರ್ಥಿಕ ವ್ಯವಸ್ಥೆಯ ಸಂಕಷ್ಟ ಎದುರಾಗಿದ್ದು, ನಿರ್ಮಿತಿ ಕೇಂದ್ರದ ಪ್ರಕಾರ ಈ ವೀರಸೇನಾನಿಯ ವಸ್ತು ಸಂಗ್ರಹಾಲಯಕ್ಕೆ ಸಂಪೂರ್ಣ ಸ್ಪರ್ಶ ನೀಡಲು ಇನ್ನು ರೂ. 3 ಕೋಟಿ ಅನುದಾನದೊಂದಿಗೆ ಅಂದಾಜು ರೂ. 6 ಕೋಟಿಗೂ ಅಧಿಕ ವೆಚ್ಚವಾಗಲಿದೆ. ಹೀಗಾಗಿ ಕೆಲಸವೂ ಕುಂಟುವಂತಾಗಿದೆ.