ಮಡಿಕೇರಿ, ಜ. 6: ಇಲ್ಲಿನ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಸುಸಜ್ಜಿತ ತಡೆಗೋಡೆಯೊಂದಿಗೆ ಹಿರಿಯ ನಾಗರಿಕರ ಸಹಿತ ಪ್ರವಾಸಿಗರ ವಿಹಾರಕ್ಕೆ ಮುಕ್ತ ಸ್ಥಳವನ್ನಾಗಿ ರೂಪಿಸುವ ‘ಮಡಿಕೇರಿ ಸ್ಕ್ವೇರ್’ ಯೋಜನೆಯು, ರಾಜ್ಯ ಪ್ರವಾಸೋದ್ಯಮ ಖಾತೆ ಹೊಂದಿರುವ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರ ಆಶಯದ್ದಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಈಗಾಗಲೇ ಸಚಿವರ ಸಲಹೆಯಂತೆ ನಗರಸಭೆ ಪ್ರಮಖರೊಂದಿಗೆ ಚರ್ಚಿಸಿ, ಅನುಭವಿ ತಾಂತ್ರಿಕ ತಜ್ಞರ ಮೂಲಕ ಯೋಜನೆಯ ನಕಾಶೆಯನ್ನು ಸಿದ್ಧಗೊಳಿಸಲು ಮುಂದಾಗಿರುವದಾಗಿ ಅವರು ವಿವರಿಸಿದ್ದಾರೆ. ನಿನ್ನೆಯ ನಗರಸಭೆ ಪ್ರಮುಖರ ಸಭೆಯಲ್ಲಿ ಈ ಬಗ್ಗೆ ಪರ - ವಿರೋಧ ಅಭಿಪ್ರಾಯಗಳು ವ್ಯಕ್ತಗೊಂಡಿರುವ ಹಿನ್ನೆಲೆ ‘ಶಕ್ತಿ’ ಜಿಲ್ಲಾಧಿಕಾರಿ ಅವರ ಗಮನ ಸೆಳೆದಾಗ ಮೇಲಿನಂತೆ ಸ್ಪಷ್ಟನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಯಾವದೇ ಒಳ್ಳೆಯ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಂಡರೂ ಸಹಮತ ಇರದೆ ಯಾವದೂ ಸಕಾಲದಲ್ಲಿ ನಡೆಯಲು ಸಾಧ್ಯವಿಲ್ಲದಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.