ಮಡಿಕೇರಿ, ಜ. 5: ಮಂಗಳಾದೇವಿ ನಗರದ ಯುವಕ ಜಯಕುಮಾರ್ ಆತ್ಮಹತ್ಯೆ ಪ್ರಕರಣ ಸಂಬಂಧ 23 ಪೊಲೀಸರ ವಿರುದ್ಧ ದಾಖಲಾಗಿರುವ ಮೊಕದ್ದಮೆ ಸಂಬಂಧ ತನಿಖೆ ಮುಂದುವರಿದಿದೆ. ಕುಶಾಲನಗರದ ಡಾ. ದಿಲೀಪ್ ಕುಮಾರ್ ಹತ್ಯೆ ಹಾಗೂ ಇತರ ಶಂಕಿತ ಪ್ರಕರಣದಲ್ಲಿ ಪೊಲೀಸರು ಮಂಗಳಾದೇವಿ ನಗರದ ಕೃಷ್ಣ ಮತ್ತು ಆತನ ಪುತ್ರ ಜಯಕುಮಾರ್ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಲ್ಲದೆ, ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದೆ.ಈ ಸಂಬಂಧ ಪತ್ರ ಬರೆದಿಟ್ಟು ಜಯಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಬೆನ್ನಲ್ಲೇ ವಿವಿಧ ಸಂಘಟನೆಗಳಿಂದ ಪ್ರತಿಭಟನೆಯೊಂದಿಗೆ 23 ಮಂದಿ ಪೊಲೀಸರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಮೃತನ ಸಹೋದರ ಚಂದ್ರಕಾಂತ್ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ತನಿಖೆಯೊಂದಿಗೆ ಪೊಲೀಸರ ಮೇಲೆ ಕ್ರಮಕ್ಕಾಗಿ ಪ್ರತ್ಯೇಕ ದೂರು ಸಲ್ಲಿಸಿದ್ದಾನೆ. ಈ ಎಲ್ಲವನ್ನು ಗಮನದಲ್ಲಿ ಇರಿಸಿಕೊಂಡು ಮಡಿಕೇರಿ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಸುಂದರರಾಜ್ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.