ಮಡಿಕೇರಿ, ಜ.6 : ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕಾಯಕಲ್ಪಕ್ಕೆ ಜಿಲ್ಲಾ ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಸಾಮಾಜಿಕ ಜಾಲತಾಣ ಅಭಿಯಾನಕ್ಕೆ ಸಕಾರಾತ್ಮಕ ರೀತಿಯಲ್ಲಿ ಸ್ಪಂದನ ದೊರಕಿದೆ. ಕಳೆದ ಆಗಸ್ಟ್‍ನಲ್ಲಿ ಜಿಲ್ಲೆಯ ಕೆಲವೆಡೆ ಸಂಭವಿಸಿದ್ದ ಪ್ರಕೃತ್ತಿ ವಿಕೋಪದಿಂದಾಗಿ ಕೊಡಗಿಗೆ ನಿರೀಕ್ಷಿತ ಪ್ರವಾಸಿಗರು ಬಾರದೆ ಹೊಟೇಲ್, ರೆಸ್ಟೋರೆಂಟ್, ರೆಸಾರ್ಟ್‍ಗಳ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿದಿತ್ತು. ಮಳೆಗಾಲದಲ್ಲಿ ಕೊಡಗಿಗೆ ಪ್ರವಾಸಿಗರ ಸಂಖ್ಯೆ ಇಳಿಮುಖಗೊಳ್ಳುತ್ತದೆ ಯಾದರೂ ಸೆಪ್ಟೆಂಬರ್ ನಂತರವೂ ಪರಿಸ್ಥಿತಿ ಚೇತರಿಕೆಯಾಗದ ಹಿನ್ನಲೆಯಲ್ಲಿ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿದ್ದವರು ಕಂಗೆಟ್ಟಿದ್ದರು.ಈ ಸಂದರ್ಭ ಕಾರ್ಯಪ್ರವೃತ್ತ ವಾದ ಜಿಲ್ಲಾ ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಸಾಮಾಜಿಕ ಜಾಲತಾಣಗಳ (ಮೊದಲ ಪುಟದಿಂದ) ಮೂಲಕ ಕೊಡಗಿಗೆ ಮತ್ತೆ ಪ್ರವಾಸಿಗರು ಬರುವಂತೆ ಮಾಡುವ ಯೋಜನೆ ರೂಪಿಸಿತ್ತು.

ಹೊಟೇಲ್, ರೆಸಾರ್ಟ್ ಅಸೋಸಿಯೇಷನ್‍ನ ಗೌರವ ಸಲಹೆಗಾರರಾದ ಜಿ. ಚಿದ್ವಿಲಾಸ್, ಅನಿಲ್ ಎಚ್.ಟಿ. ಸಂಯೋಜನೆಯೊಂದಿಗೆ ಬೆಂಗಳೂರಿನ ಹೆಸರಾಂತ ದೃಷ್ಟಿ ಮೀಡಿಯಾ ಸಂಸ್ಥೆಯ ಮುಖ್ಯಸ್ಥ, ಚಿತ್ರ ನಿರ್ದೇಶಕ ಸಂತೋಷ್ ಕೊಡಂಕೇರಿ ಅವರು ಕೊಡಗಿನ ಪ್ರವಾಸೋದ್ಯಮ ಸಂಬಂಧಿತ ನಾಲ್ಕು ಕಿರುಚಿತ್ರಗಳನ್ನು ನಿರ್ಮಿಸಿದರು. ಸುಮಧುರ ಸಂಗೀತದ ಹಿನ್ನಲೆಯಲ್ಲಿ ನಿರ್ಮಿತವಾದ ಈ ಕಿರುಚಿತ್ರಗಳ ಪೈಕಿ ಒಂದರಲ್ಲಿ ಕೊಡಗಿಗೆ ಬರುವ ನವವಿವಾಹಿತರು ಇಲ್ಲಿನ ಪ್ರವಾಸಿ ತಾಣಗಳಿಗೆ ತೆರಳುವ ಪರಿಕಲ್ಪನೆ ಹೊಂದಿದ್ದರೆ ಮತ್ತೊಂದು ಕಿರುಚಿತ್ರ ಕುಟುಂಬಸ್ಥರು ಕೊಡಗಿಗೆ ಬಂದು ಹಾಯಾಗಿ ಅಡ್ಡಾಡುವ ದೃಶ್ಯಗಳನ್ನು ಬಿಂಬಿಸಿತ್ತು. ಮತ್ತೊಂದು ಚಿತ್ರದಲ್ಲಿ ಯುವಪೀಳಿಗೆಯ ಪ್ರವಾಸಿಗರು ಕೊಡಗಿಗೆ ಭೇಟಿ ನೀಡಿದ ಸಂದರ್ಭ ಇಲ್ಲಿನ ಸಾಹಸಮಯ ಕಾರ್ಯಗಳಲ್ಲಿ ತೊಡಗಿಸಿಕೊಂಡು ಆನಂದಿಸುವ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಅಂತೆಯೇ ಯೋಗ, ಧ್ಯಾನಕ್ಕೂ ಕೊಡಗು ಪ್ರಶಸ್ತ ಎಂಬ ಪರಿಕಲ್ಪನೆಯ ಕಿರುಚಿತ್ರವನ್ನೂ ಸಂತೋಷ್ ನಿರ್ಮಿಸಿದ್ದರು.

ಈ ಕಿರುಚಿತ್ರಗಳು ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಟ್ವಿಟರ್, ಇನ್ಸ್ಟ್ರಾಗ್ರಾಮ್, ವಾಟ್ಪಪ್ ಸೇರಿದಂತೆ ವಿವಿಧ ಕಡೆಗಳಲ್ಲಿ ವ್ಯಾಪಕ ಪ್ರಚಾರ ಪಡೆದವು. ಕೊಡಗು ಮತ್ತೆ ಗತವೈಭವದತ್ತ ಮೋಹಕ ಮತ್ತು ಸುರಕ್ಷಿತ ಎಂಬ ಸಂದೇಶವನ್ನೂ ಪರಿಣಾಮಕಾರಿಯಾಗಿ ಈ ಕಿರುಚಿತ್ರಗಳು ಬಿಂಬಿಸಿದ್ದವು. ಅಂತೆಯೇ ವಿವಿಧ ರೀತಿಯ ಚಿತ್ರಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೊಡಗು ಸುರಕ್ಷಿತವಾಗಿದೆ ಎಂಬ ನೈಜ ಚಿತ್ರಣವನ್ನು ಪ್ರಸಾರಿಸುವ ಕಾರ್ಯವೂ ವ್ಯಾಪಕವಾಗಿ ನಡೆಯಿತು.

ಇದಾದ ಬಳಿಕ ಡಿಸೆಂಬರ್ ಮೂರನೇ ವಾರದಿಂದ ಜಿಲ್ಲಾ ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಸಾಮಾಜಿಕ ಜಾಲತಾಣಗಳ ಮೂಲಕ ಕೊಡಗಿನ ಪ್ರವಾಸೀ ತಾಣಗಳು ಸುಂದರವಾಗಿದೆ, ಸುರಕ್ಷಿತವಾಗಿದೆ ಎಂಬ ಸಂದೇಶವನ್ನು ವ್ಯಾಪಕವಾಗಿ ಸಾರಿತ್ತು. ಹೀಗಾಗಿ ಡಿಸೆಂಬರ್ ಕೊನೆ ವಾರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕೊಡಗಿಗೆ ಪ್ರವಾಸಿಗರು ಜಿಲ್ಲೆಗೆ ಬರುವಂತಾಯಿತು ಎಂದು ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಹೇಳಿದರು. ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಾ.ರಾ. ಮಹೇಶ್ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿರುವದು ಕೂಡ ಕೊಡಗಿನ ಪ್ರವಾಸೋದ್ಯಮ ಕ್ಷೇತ್ರ ಚೇತರಿಕೆಗೆ ಸಹಕಾರಿಯಾಗಿದೆ ಎಂದೂ ನಾಗೇಂದ್ರ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿನೂತನ ರೀತಿಯಲ್ಲಿ ಮತ್ತು ವ್ಯಾಪಕವಾಗಿ ಪ್ರಚಾರ ನಡೆಸಿದ್ದರಿಂದಾಗಿ ಕೊಡಗಿಗೆ ಮತ್ತೆ ಪ್ರವಾಸಿಗರು ಬರುವಂತಾಗಿದೆ. ಹೋಲಿಕೆಯಲ್ಲಿ ಹೊಸ ವರ್ಷಕ್ಕೆ ಹಿಂದಿನ ವರ್ಷಗಳಷ್ಟು ಪ್ರವಾಸಿಗರು ಬಾರದೇ ಹೋದರೂ; ಕಳೆದ ತಿಂಗಳುಗಳಿಗೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ ಎಂದು ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಾಜಿರ್ ಹೇಳಿದ್ದಾರೆ.

ಅನೇಕ ಪ್ರವಾಸಿಗರು ಸಾಮಾಜಿಕ ಜಾಲತಾಣಗಳ ಮೂಲಕ ಗಮನಿಸಿ ಕೊಡಗಿಗೆ ಬಂದಿರುವದಾಗಿ ಹೇಳುತ್ತಿದ್ದು, ಅಸೋಸಿಯೇಷನ್ ಕೈಗೊಂಡ ವಿನೂತನ ರೀತಿಯ ಪ್ರಚಾರ ಫಲನೀಡಿದೆ ಎಂದು ಅಸೋಸಿಯೇಶನ್ ಖಜಾಂಚಿ ಭಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೊಟೇಲ್ ಅಸೋಸಿಯೇಷನ್ ಕೈಗೊಂಡ ಸಾಮಾಜಿಕ ಜಾಲತಾಣಗಳ ಪ್ರಚಾರದ ಬಗ್ಗೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವೆಬ್‍ಸೈಟ್ ಸೇರಿದಂತೆ ವಿವಿಧ ಜಾಲತಾಣಗಳಲ್ಲಿಯೂ ಇದೇ ಸಂದೇಶದ ಪ್ರಚಾರವನ್ನು ದೇಶ ವಿದೇಶಗಳಲ್ಲಿಯೂ ಕೈಗೊಳ್ಳಲಾಗುತ್ತಿದೆ.

ಇದೇ ಮೊದಲ ಬಾರಿಗೆ ಕೊಡಗಿನ ಪ್ರವಾಸೋದ್ಯಮದ ಬಗ್ಗೆ ದೇಶವ್ಯಾಪಿ ಪ್ರಚಾರವಾಗಿದ್ದು ಗುಜರಾತ್, ಕೇರಳ ಪ್ರವಾಸೋದ್ಯಮ ಇಲಾಖೆಯೂ ಕೂಡ ಕೊಡಗು ಪ್ರವಾಸೋದ್ಯಮ ಸಂಬಂಧಿತ ಸಂದೇಶಗಳನ್ನು ವ್ಯಾಪಕವಾಗಿ ತಮ್ಮ ರಾಜ್ಯದಲ್ಲಿ ಪ್ರಚಾರ ಮಾಡುತ್ತಿದೆ. ಕೇವಲ 1 ತಿಂಗಳಿನಲ್ಲಿಯೇ ಕೊಡಗಿನ ಪ್ರವಾಸೋದ್ಯಮ ಸಂದೇಶಕ್ಕೆ ಜಾಲತಾಣಗಳಲ್ಲಿ 1.20 ಲಕ್ಷಕ್ಕೂ ಹೆಚ್ಚಿನ ವೀಕ್ಷಕರು ದೊರಕಿದ್ದಾರೆ ಎಂದು ದೃಷ್ಟಿ ಮೀಡಿಯಾದ ಸಂತೋಷ್ ಕೊಡಂಕೇರಿ ಮಾಹಿತಿ ನೀಡಿದ್ದಾರೆ. ಕೊಡಗಿನ ನಿಸರ್ಗ ಸೌಂದರ್ಯ, ಜನಜೀವನ, ಪ್ರವಾಸಿತಾಣ, ಸಂಸ್ಕøತಿ ಸಂಬಂಧಿತ ಹಲವಾರು ಸಂದೇಶಗಳನ್ನು ಪ್ರವಾಸಿಗರಿಗೆ ತಲುಪಿಸುವ ಪ್ರಯತ್ನ ನಡೆದಿದೆ. ಕೊಡಗು ಜಿಲ್ಲೆಯನ್ನೇ ಕೇಂದ್ರೀಕರಿಸಿ ದೇಶವ್ಯಾಪಿ ಸಾಮಾಜಿಕ ಜಾಲತಾಣಗಳಲ್ಲಿ ಕೊಡಗು ಸುರಕ್ಷಿತವಾಗಿದೆ ಎಂದು ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ.

ಮುಂದಿನ ಶುಕ್ರವಾರದಿಂದ ಕೊಡಗಿನಲ್ಲಿ ಆಯೋಜಿತ ಪ್ರವಾಸಿ ಉತ್ಸವ ಕೂಡ ಮುಂದಿನ ದಿನಗಳಲ್ಲಿ ಅತ್ಯಧಿಕ ಪ್ರವಾಸಿಗರು ಕೊಡಗು ಜಿಲ್ಲೆಗೆ ಬರುವ ಸಾಧ್ಯತೆಗೆ ಕಾರಣವಾಗಲಿದೆ. ಹೆಸರಾಂತ ಕಲಾವಿದರಾದ ಎಂ.ಡಿ. ಪಲ್ಲವಿ, ಅರ್ಜುನ್‍ಜನ್ಯಾ, ಸರಿಗಮ ಖ್ಯಾತಿಯ ಶ್ರೀಹರ್ಷ, ಚಿನ್ನಪ್ಪ ಅವರ ಸಾಂಸ್ಕøತಿಕ ಸಂಜೆಯೊಂದಿಗೆ, ಶ್ವಾನ ಪ್ರದರ್ಶನ, ರಾಜಾಸೀಟ್‍ನಲ್ಲಿ ಫಲಪುಪ್ಪ ಪ್ರದರ್ಶನಗಳೂ ಕೂಡ ಕೊಡಗು ಉತ್ಸವದಲ್ಲಿ ಪ್ರವಾಸಿಗರನ್ನು ಆಕರ್ಷಿಸಲಿದೆ. ಪ್ರವಾಸೋದ್ಯಮ ಇಲಾಖೆಯೂ ಇದೀಗ ಕೊಡಗು ಪ್ರವಾಸಿ ಉತ್ಸವಕ್ಕಾಗಿ ವಿಶೇಷ ಪ್ರವಾಸಿ ಪ್ಯಾಕೇಜ್ ಆಯೋಜಿಸಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜನಾರ್ಧನ್ ಮಾಹಿತಿ ನೀಡಿದ್ದಾರೆ.

ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ನಡೆಯುತ್ತಿರುವ ‘ಸ್ಟ್ರೀಟ್ ಫೆಸ್ಟಿವಲ್’ ಕೂಡ ಉತ್ಸವದ ಆಕರ್ಷಣೆಯಾಗಿದ್ದು, ಪ್ರವಾಸಿಗರೊಂದಿಗೆ ಕೊಡಗಿನ ಜನತೆಗೂ ಈ ಉತ್ಸವ ಹೊಸ ಅನುಭವ ನೀಡುವ ಉದ್ದೇಶ ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‍ದ್ದಾಗಿದೆ. ಪ್ರಕೃತಿ ವಿಕೋಪದ ದುರಂತದ ದಿನಗಳ ಕಹಿ ನೆನಪನ್ನು ಮರೆತು ಮತ್ತೆ ಗತವೈಭವದ ಪ್ರವಾಸಿ ದಿನಗಳಿಗಾಗಿ ಕೊಡಗು ಸಜ್ಜಾಗುತ್ತಿದೆ.