ಕುಶಾಲನಗರ, ಜ. 5: ಕನ್ನಡ ಸಾಹಿತ್ಯ ಲೋಕಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದೆ ಎಂದು ಕುಶಾಲನಗರ ಸಂಚಾರಿ ಠಾಣೆಯ ಉಪ ನಿರೀಕ್ಷಕ ಸೋಮೇಗೌಡ ಹೇಳಿದರು.

ಕುಶಾಲನಗರ ಸಮೀಪದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ, ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಚನ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿ ಉಪನಿಷತ್ತು, ವೇದಗಳು, ತತ್ವ ಶಾಸ್ತ್ರಗಳು ಜನಸಾಮಾನ್ಯರಿಗೆ ಸುಲಭದಲ್ಲಿ ಅರ್ಥವಾಗುವಂತಿರಲಿಲ್ಲ. ಆಧ್ಯಾತ್ಮಿಕ ರಂಗಮಂಟಪದಲ್ಲಿ ಬಸವಾದಿ ಶರಣರು ಜನಸಾಮಾನ್ಯರಿಗೆ ಸುಲಭದಲ್ಲಿ ಅರ್ಥವಾಗುವ ರೀತಿ ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಮುಖ್ಯ ಅತಿಥಿಯಾಗಿದ್ದ ಕೂಡಿಗೆ ಡಯಟ್‍ನ ಹಿರಿಯ ಉಪನ್ಯಾಸಕ ಕೆ.ವಿ. ಸುರೇಶ್ ಮಾತನಾಡಿ, ಡಾ. ಅಂಬೇಡ್ಕರ್ ದೇಶಕ್ಕೆ ಸಂವಿಧಾನ ನೀಡಿದರೆ, ಬಸವಣ್ಣನವರು ಪ್ರತೀ ಮನುಷ್ಯನ ಬದುಕಿಗೆ ಸಂವಿಧಾನ ಕೊಟ್ಟ ಮಹಾಪುರುಷ ಎಂದರು.

ವಚನ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ವಚನ ಗಾಯನ ಗಮನ ಸೆಳೆಯಿತು. ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಕೆ.ಪ್ರಕಾಶ್, ಬಸವನಹಳ್ಳಿ ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲ ಚಂದ್ರಶೇಖರ ರೆಡ್ಡಿ, ಉಪನ್ಯಾಸಕರು ಇದ್ದರು.