ಮಡಿಕೇರಿ, ಜ. 5: ಕಳೆದ ಮಳೆಗಾಲದ ವೇಳೆ ಬರೆ ಕುಸಿತ ಉಂಟಾಗಿ ನಂತರ ಕೆಡವಲ್ಪಟ್ಟ ಹಳೇ ಖಾಸಗಿ ಬಸ್ ನಿಲ್ದಾಣದ ಜಾಗದಲ್ಲಿ ತಡೆಗೋಡೆ ನಿರ್ಮಿಸಿ ಪ್ರವಾಸೋದ್ಯಮಕ್ಕೆ ಪೂರಕವಾದ ಮುಕ್ತ ಸ್ಥಳವನ್ನಾಗಿ ಮಾಡುವ ನಿಟ್ಟಿನಲ್ಲಿ ತಯಾರಿಸಲಾಗಿದ್ದ ‘ಮಡಿಕೇರಿ ಸ್ಕ್ವೇರ್’ ಯೋಜನೆಗೆ ನಗರಸಭೆಯ ಬಿಜೆಪಿ ಸದಸ್ಯರುಗಳು ವಿರೋಧ ವ್ಯಕ್ತಪಡಿಸಿ ದರೂ, ಯೋಜನೆಯನ್ನು ಕಾರ್ಯ ರೂಪಕ್ಕೆ ತರುವದಾಗಿ ಅಧ್ಯಕ್ಷರು ಘೋಷಿಸಿದರು.ನಗರಸಭಾ ಸಭಾಂಗಣದಲ್ಲಿಂದು ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆಯಲ್ಲಿ ‘ಮಡಿಕೇರಿ ಸ್ಕ್ವೇರ್’ ಯೋಜನೆ ಕುರಿತು ಚರ್ಚಿಸಲು ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಕಾವೇರಮ್ಮ ಸೋಮಣ್ಣ ಹಾಗೂ ಆಯುಕ್ತ ರಮೇಶ್ ಇವರುಗಳು ಯೋಜನೆ ಕುರಿತು ಪ್ರಸ್ತಾಪಿಸಿದರು. ಹಳೇ ಖಾಸಗಿ (ಮೊದಲ ಪುಟದಿಂದ) ಬಸ್ ನಿಲ್ದಾಣದ ಜಾಗದಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ತಡೆಗೋಡೆ ನಿರ್ಮಿಸಿ, ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರವಾಗಿ ಮಾಡುವ ನಿಟ್ಟಿನಲ್ಲಿ ಚರ್ಚಿಸಲು ಸಭೆ ಕರೆದಿರುವದಾಗಿ ವಿವರಿಸಿದರು.

ಆಧುನಿಕ ತಂತ್ರಜ್ಞಾನದೊಂದಿಗೆ ತಡೆಗೋಡೆ ನಿರ್ಮಿಸುವ ಬಗ್ಗೆ ಹಿರಿಯ ನಿವೃತ್ತ ಇಂಜಿನಿಯರ್ ಸತ್ಯನಾರಾಯಣರಾವ್ ಅವರು ಪ್ರೊಜೆಕ್ಟರ್ ಮೂಲಕ ಮಾಹಿತಿ ನೀಡಿದರು. ನಂತರ ತಡೆಗೋಡೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ ಬಿಜೆಪಿ ಸದಸ್ಯರುಗಳು ‘ಮಡಿಕೇರಿ ಸ್ಕ್ವೇರ್’ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯರುಗಳಾದ ಪಿ.ಡಿ. ಪೊನ್ನಪ್ಪ, ಕೆ.ಎಸ್. ರಮೇಶ್, ಉಣ್ಣಿಕೃಷ್ಣ ಇವರುಗಳು ಮಾತನಾಡಿ, ಆಧುನಿಕ ತಂತ್ರಜ್ಞಾನದಂತೆ ತಡೆಗೋಡೆ ನಿರ್ಮಾಣವಾಗಲಿ. ಆದರೆ, ಪ್ರವಾಸೋದ್ಯಮಕ್ಕೆ ಪೂರಕವಾದ ಯೋಜನೆ ಕೈಗೊಳ್ಳುವದಕ್ಕೆ ನಮ್ಮ ವಿರೋಧವಿದೆ. ಇದರ ಬದಲು ಕಾಂಪ್ಲೆಕ್ಸ್ ನಿರ್ಮಿಸಿ ವಾಹನಗಳ ಪಾರ್ಕಿಂಗ್‍ಗೆ ಆ ಸ್ಥಳದಲ್ಲಿ ಅವಕಾಶ ಕಲ್ಪಿಸಿದರೆ ಉತ್ತಮ ಎಂದರು.

ಪ್ರವಾಸೋದ್ಯಮಕ್ಕೆ ಪೂರಕ ಸ್ಥಳವಾಗಿ ಅಭಿವೃದ್ಧಿಪಡಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಮಾತ್ರವಲ್ಲದೆ ಉಸ್ತುವಾರಿ ಸಚಿವರೂ, ಪ್ರವಾಸೋದ್ಯಮ ಸಚಿವರಾದ ಸಾ.ರಾ. ಮಹೇಶ್ ಆಸಕ್ತಿ ತೋರಿದ್ದಾರೆ ಎಂದು ಕಾವೇರಮ್ಮ ಸೋಮಣ್ಣ ಹಾಗೂ ಸದಸ್ಯ ನಂದಕುಮಾರ್ ಹೇಳಿದರಾದರೂ, ಬಿಜೆಪಿ ಸದಸ್ಯರು ವಿರೋಧಿಸಿದರು. ಸದಸ್ಯರಾದ ಶ್ರೀಮತಿ ಬಂಗೇರ, ತಜಸ್ಸುಂ ಮಾತನಾಡಿ, ಹಳೇ ಖಾಸಗಿ ಬಸ್ ನಿಲ್ದಾಣ ಜಾಗದಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ಯೋಜನೆಯನ್ನು ಜಾರಿಗೆ ತರುವದು ಒಳ್ಳೆಯ ತೀರ್ಮಾನ ಎಂದು ಹೇಳಿದರು.

ಈ ಸಂದರ್ಭ ಎದ್ದು ನಿಂತ ಸದಸ್ಯ ನಂದಕುಮಾರ್ ಅವರು, ಅಧ್ಯಕ್ಷರತ್ತ ಬೊಟ್ಟು ಮಾಡಿ ವಿರೋಧಪಡಿಸುವವರ ಅಭಿಪ್ರಾಯ ದಾಖಲಾಗಲಿ, ಬಹುಮತ ಸದಸ್ಯರ ಒಪ್ಪಿಗೆ ಮೇಲೆ ಈ ಯೋಜನೆ ಕಾರ್ಯರೂಪಕ್ಕೆ ತರುವ ಬಗ್ಗೆ ದಾಖಲೆಯಲ್ಲಿ ನಮೂದಿಸಿ ಎಂದು ಹೇಳಿದರು. ಅದಕ್ಕೆ ಅಧ್ಯಕ್ಷರು ಒಪ್ಪಿಗೆ ನೀಡಿದರು. ಎರಡು ಗಂಟೆಗೂ ಅಧಿಕ ಕಾಲ ನಡೆದ ಸಭೆಯಲ್ಲಿ ಮಡಿಕೇರಿ ಸ್ಕ್ವೇರ್’ ಯೋಜನೆಯ ಬಗ್ಗೆ ನೀಲಿ ನಕಾಶೆ ಪ್ರದರ್ಶಿಸದಿರುವದು ಹಲವು ಸದಸ್ಯರ ಗೊಂದಲ ಹಾಗೂ ಅಸಮಾಧಾನಕ್ಕೆ ಕಾರಣವಾಯಿತು.