ಮಡಿಕೇರಿ, ಜ. 5: ರಾಜ್ಯದ ಬ್ಯಾಂಕ್‍ಗಳಲ್ಲಿ ಉದ್ಯೋಗಕ್ಕಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಕರ್ನಾಟಕದ ನಿವಾಸಿಗಳಾಗಿರುವ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಕನ್ನಡ ಭಾಷೆ ಕಲಿತವರಿಗೆ ಹಾಗೂ ರಾಜ್ಯದ ನಿವಾಸಿಗಳಿಗೇ ಅವಕಾಶ ಕಲ್ಪಿಸಬೇಕು ಎಂದು ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್‍ಸಿಂಹ ಮನವಿ ಮಾಡಿದ್ದಾರೆ.ಅವರು ಈ ಕುರಿತಾಗಿ ಕೇಂದ್ರದ ಸಾಂಖ್ಯಿಕ ಮತ್ತು ಯೋಜನಾ ಹಾಗೂ ರಸಗೊಬ್ಬರ ಖಾತೆ ಸಚಿವ ಕೊಡಗಿನವರಾದ ಡಿ.ವಿ.ಸದಾನಂದ ಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿಯನ್ನು ಪರಿಗಣಿಸಿದ ಸಚಿವ ಸದಾನಂದಗೌಡ ಅವರು ಈ ಬಗ್ಗೆ ಸೂಕ್ತ ನಿರ್ಧಾರಕ್ಕಾಗಿ ಕೇಂದ್ರ ಅರ್ಥ ಖಾತೆ ಸಚಿವ ಅರುಣ್ ಜೈಟ್ಲಿ ಅವರಿಗೆ ಲಿಖಿತ ಮನವಿ ಕಳುಹಿಸಿದ್ದಾರೆ. ಸಂಸದ ಪ್ರತಾಪ್‍ಸಿಂಹ ಮತ್ತಿತರ ಅನೇಕ ಸಂಸದರು, ತನಗೆ ಈಗಾಗಲೇ ಈ ಬಗ್ಗೆ ಮನವಿ ಮಾಡಿದ್ದು, ಕೇಂದ್ರ ಸರಕಾರ ಈ ಬಗ್ಗೆ ಪರಿಗಣಿಸುವ ಅಗತ್ಯತೆ ಕುರಿತು ಸದಾನಂದ ಗೌಡ ಅವರು ಅರ್ಥ ಖಾತೆ ಸಚಿವ ಅರುಣ್ ಜೇಟ್ಲಿ ಅವರ ಗಮನಕ್ಕೆ ತಂದಿದ್ದಾರೆ.

ಸದಾನಂದ ಗೌಡ ಅವರಿಗೆ ಪ್ರತಾಪ್ ಸಿಂಹ ಅವರು ಇತ್ತೀಚೆಗೆ ಸಲ್ಲಿಸಿರುವ ಮನವಿಯ ಅಂಶ ಈ ಕೆಳಗಿನಂತಿದೆ.

ಆಯಾ ರಾಜ್ಯಗಳಲ್ಲಿ ಆಯಾ ಸ್ಥಳಗಳ ಬ್ಯಾಂಕ್‍ಗಳಿಗೆ ಅಭ್ಯರ್ಥಿಗಳನ್ನು ಉದ್ಯೋಗಕ್ಕಾಗಿ ಆಯ್ಕೆ ಮಾಡುವಾಗ ಅವರು ಆಯಾ ರಾಜ್ಯದಲ್ಲಿರುವ ಆಡಳಿತ ಭಾಷೆಯ ಪರಿಜ್ಞಾನ ಹೊಂದಿರುವÀದನ್ನು ಖಾತರಿಪಡಿಸಿಕೊಳ್ಳಬೇಕು. 2012 ರಿಂದ 2014 ರ ವರೆಗೆ ಕೇಂದ್ರದ ಪ್ರಕಟಣೆಯೊಂದರ ಅನ್ವಯ ಜಾರಿಗೊಳಿಸಿದ್ದ ಕ್ರಮದಂತೆ ಬ್ಯಾಂಕ್‍ಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅಭ್ಯರ್ಥಿಗಳು ಆಯಾ ರಾಜ್ಯಗಳ ಆಡಳಿತ ಭಾಷೆಯ ಪರಿಜ್ಞಾನ ಹೊಂದಿರಬೇಕು ಎನ್ನುವದಕ್ಕಾಗಿ ಸಂದರ್ಶನ ಸಂದರ್ಭ ದಾಖಲಾತಿ ನೀಡಬೇಕಿತ್ತು. ಆದರೆ ಕೇಂದ್ರ ಉದ್ಯೋಗ ಆಯ್ಕೆಯ ಸಂಸ್ಥೆ (ಐಬಿಪಿಎಸ್) 2015 ರಲ್ಲಿ ಈ ಒಂದು ನಿರ್ಬಂಧವನ್ನು ರದ್ದುಗೊಳಿಸಿತ್ತು. ಇದರಿಂದಾಗಿ ಕರ್ನಾಟಕಕ್ಕೂ ಅನ್ಯಾಯವಾಗಿದೆ. ಕನ್ನಡಿಗರಿಗಿಂತ ಹೊರ ರಾಜ್ಯದ ಅಭ್ಯರ್ಥಿಗಳು ಕರ್ನಾಟಕದಲ್ಲಿರುವ ಬ್ಯಾಂಕ್‍ಗಳಿಗೆ ಉದ್ಯೋಗಿಗಳಾಗಿ ಆಯ್ಕೆಯಾಗಲು ಕಾರಣವಾಗಿದೆ. ಐಬಿಪಿಎಸ್ ಸಂಸ್ಥೆ ಮತ್ತೆ ಈ ನಿರ್ಬಂಧವನ್ನು ಅಭ್ಯರ್ಥಿಗಳ ಆಯ್ಕೆ ಸಂದರ್ಭ ಜಾರಿಗೊಳಿಸಲು ಅಗತ್ಯ ತಿದ್ದುಪಡಿ ತರುವಂತೆ ಕೇಂದ್ರ ಸರಕಾರ ಸೂಚನೆ ನೀಡುವಂತೆಯೂ ಪ್ರತಾಪ್ ಸಿಂಹ ಮನವಿಯಲ್ಲಿ ಕೋರಿದ್ದಾರೆ.. ಕರ್ನಾಟಕದಲ್ಲಿ ಸಹಸ್ರಾರು ನಿರುದ್ಯೋಗಿಗಳಿದ್ದಾರೆ. ಆದರೆ, ಇತರ ರಾಜ್ಯಗಳಲ್ಲಿ ಬ್ಯಾಂಕ್‍ಗಳಿಗೆ ಅಭ್ಯರ್ಥಿಗಳ ಆಯ್ಕೆ ಸಂದರ್ಭ ಆಯಾ ಸ್ಥಳೀಯರಿಗೆ ಅಧಿಕ ಅವಕಾಶ ನೀಡಿರುವ ಮಾನದಂಡ ಪಾಲಿಸುತ್ತಿದ್ದು ಕರ್ನಾಟಕದಲ್ಲಿ ಮಾತ್ರ ಈ ಮಾನದಂಡ ಅಸ್ತಿತ್ವದಲ್ಲಿ ಇಲ್ಲದಿರುವದರಿಂದಾಗಿ ರಾಜ್ಯದ ನಿರುದ್ಯೋಗಿಗಳಿಗೆ ಅನ್ಯಾಯವಾಗಿದೆ ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಸ್ಪಷ್ಟ ನಿದರ್ಶನವೆಂಬಂತೆ ತೆಲಂಗಾಣ ಮತ್ತು ಕೇರಳ ರಾಜ್ಯಗಳಲ್ಲಿ ಬ್ಯಾಂಕ್ ಗಳಿಗೆ ಅಭ್ಯರ್ಥಿಗಳ ಆಯ್ಕೆ ಸಂದರ್ಭ ಶೇ.100 ರಷ್ಟು ಆಯಾ ರಾಜ್ಯಗಳÀ ಸ್ಥÀ್ತಳೀಯ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಾಗುತ್ತಿದೆ. ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಶೇ. 95 ರಷ್ಟು ಆಯಾ ರಾಜ್ಯದ ಸ್ಥಳೀಯರಿಗೇ ಬ್ಯಾಂಕ್ ಉದ್ಯೋಗಿಗಳಾಗಿ ಆಯ್ಕೆಯಾಗುವಲ್ಲಿ ಆದ್ಯತೆ ನೀಡಲಾಗುತ್ತಿದೆ.