ಗೋಣಿಕೊಪ್ಪಲು, ಜ. 5: ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗದಂತೆ ಅಧಿಕಾರಿಗಳು ಎಚ್ಚರವಹಿಸುವಂತೆ ಜಿಲ್ಲಾ ಪಂಚಾಯತ್‍ನ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಚೀಯಕ್‍ಪೂವಂಡ ಬೋಪಣ್ಣ ಅಧಿಕಾರಿಗಳಿಗೆ ಸಲಹೆ ನೀಡಿದರು.ಪೊನ್ನಂಪೇಟೆ ತಾಲೂಕು ಪಂಚಾಯ್ತಿ ಸಾಮಥ್ರ್ಯ ಸೌಧದ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ, ಮೇಲ್ವಿಚಾರಕರು, ಆಶ್ರಮ ಶಾಲೆಯ ಶಿಕ್ಷಕರು, ಅಡುಗೆಯವರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ಅವರು, ವಸತಿ ನಿಲಯಗಳ ಸಮಸ್ಯೆ ಬಗ್ಗೆ ಸಮಗ್ರ ಮಾಹಿತಿ ಪಡೆದರು.ಮಾರ್ಚ್ ಅಂತ್ಯದೊಳಗೆ ಸರ್ಕಾರ ಬಿಡುಗಡೆ ಮಾಡಿರುವ ಅನುದಾನಗಳನ್ನು ಸದ್ಬಳಕೆ ಮಾಡಿ ಕೊಳ್ಳಬೇಕು.ಕಾಮಗಾರಿ ನಡೆಯುವ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಗುಣಮಟ್ಟದ ಬಗ್ಗೆ ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳಿಗೆ ಬೇಸಿಗೆ ಸಮಯದಲ್ಲಿ

(ಮೊದಲ ಪುಟದಿಂದ) ಕುಡಿಯುವ ನೀರಿಗೆ ತೊಂದರೆ ಆಗದಂತೆ ಈಗಿಂದಲೇ ಕ್ರಮಕ್ಕೆ ಮುಂದಾಗಬೇಕು. ಮುಂದಿನ ಪರೀಕ್ಷೆಯಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ಗರಿಷ್ಠ ಅಂಕದಲ್ಲಿ ತೇರ್ಗಡೆ ಹೊಂದಲು ಗಣಿತ, ವಿಜ್ಞಾನ ವಿಷಯದಲ್ಲಿ ವಿಶೇಷ ತರಗತಿಗಳನ್ನು ಅನುಭವಿ ಶಿಕ್ಷಕರುಗಳಿಂದ ಮಾಡಿಸಬೇಕು. ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಲ್ಲಿ ಅಧಿಕಾರಿ ಗಳನ್ನು ಹೊಣೆ ಮಾಡಲಾಗುವದೆಂದು ಎಚ್ಚರಿಸಿದರು.

ನಿಲಯದಲ್ಲಿರುವ ವಿದ್ಯಾರ್ಥಿ ನಿಯರ ಬಗ್ಗೆ ವಾರ್ಡನ್‍ಗಳು ಹೆಚ್ಚಿನ ನಿಗಾ ವಹಿಸಬೇಕು. ನಿಲಯದಿಂದ ಹೊರ ಹೋಗುವ ಸಂದರ್ಭ ವಿದ್ಯಾರ್ಥಿನಿಯ ಪೋಷಕರ ಅನುಮತಿಯಿಲ್ಲದೆ ಹೊರ ಕಳುಹಿಸದಂತೆ ನಿರ್ದೇಶನ ನೀಡಿದರು. ಪೊನ್ನಂಪೇಟೆ ಸ್ಮಶಾನ ಸಮೀಪವಿರುವ ವಸತಿ ನಿಲಯವನ್ನು ಬೇರೆಡೆಗೆ ಮುಂದಿನ ಸಾಲಿನಿಂದ ಬದಲಾಯಿಸಲು ಅಧಿಕಾರಿಗಳು ಅಧ್ಯಕ್ಷರಿಗೆ ಮನವಿ ಮಾಡಿದರು.

ತಾಲೂಕಿನಲ್ಲಿರುವ ಅಂಬೇಡ್ಕರ್ ಭವನಗಳಿಗೆ ಸುಣ್ಣ, ಬಣ್ಣ ಬಳಿದು ಸಾರ್ವಜನಿಕರ ಅನುಕೂಲಕ್ಕಾಗಿ ನೀಡಬೇಕೆಂದು ಸೂಚನೆ ನೀಡಿದ ಅವರು, ವಸತಿ ನಿಲಯದ ಮಕ್ಕಳನ್ನು ತಯಾರು ಮಾಡಿ ಮೊರಾರ್ಜಿ ಶಾಲೆ, ನವೋದಯ ಶಾಲೆಗಳಿಗೆ ಸೇರಿಸುವಂತಹ ಕೆಲಸದಲ್ಲಿ ಶಿಕ್ಷಕರು ಹೆಚ್ಚಿನ ನಿಗಾವಹಿಸಬೇಕೆಂದು ಬೋಪಣ್ಣ ನಿರ್ದೇಶನ ನೀಡಿದರು.

ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಜಾತಿ ದೃಢೀಕರಣ ಪತ್ರ, ಆದಾಯ ದೃಢೀಕರಣ ಪತ್ರ ಹಾಗೂ ಆಧಾರ್ ಕಾರ್ಡ್ ಖುದ್ದಾಗಿ ಮಾಡಿಕೊಡಲು ವಸತಿ ನಿಲಯದ ಮೇಲ್ವಿಚಾರಕರು ವಿಶೇಷ ಕಾಳಜಿ ವಹಿಸಬೇಕು ಅಗತ್ಯವಿದ್ದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆಂದು ಹೇಳಿದರು.

ವಸತಿ ನಿಲಯದ ಖಾಲಿ ಜಾಗಗಳಲ್ಲಿ ಅಡುಗೆಯವರು, ವಿದ್ಯಾರ್ಥಿಗಳು, ಶ್ರಮದಾನ ಮಾಡುವ ಮೂಲಕ ಕೈತೋಟ ಮಾಡಿ ಅಗತ್ಯ ವಿರುವ ತರಕಾರಿ ಬೆಳೆಸಬೇಕು. ಬೀಜ ಪೂರೈಕೆ ಮಾಡಲಾಗುವದು ಎಂದರು.

ಸಮಗ್ರ ಗಿರಿಜನ ಅಭಿವೃದ್ದಿ ಯೋಜನೆಯ ಜಿಲ್ಲಾ ಸಮನ್ವಯ ಅಧಿಕಾರಿ ಶಿವಕುಮಾರ್ ಮಾತನಾಡಿ ವಸತಿ ನಿಲಯಗಳಲ್ಲಿ ಹಲವಾರು ಬದಲಾವಣೆಗಳು ಕಂಡಿವೆ. ಮುಂದಿನ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದು ತೇರ್ಗಡೆಯಾಗುವದೇ ದೊಡ್ಡ ಸವಾಲು. ಮುಂದಿನ ಶೈಕ್ಞಣಿಕ ಸಾಲಿನಿಂದ ಶಿಕ್ಷಕರಿಗೆ ವಿಶೇಷ ತರಬೇತಿಗಳನ್ನು ನೀಡುವ ಮೂಲಕ ನಿಲಯದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಶಿಕ್ಷಣ ಮಟ್ಟವನ್ನು ಸುಧಾರಣೆ ಮಾಡಲು ಪ್ರಯತ್ನ ಮಾಡಲಾಗುವದು ಎಂದರು.

ಸಭೆಯಲ್ಲಿ ಅಧಿಕಾರಿಗಳಾದ ಕವಿತ ನವೀನ್, ಹೆಚ್.ಜಿ. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣಾಧಿಕಾರಿ ಪ್ರೀತಿ ಸ್ವಾಗತಿಸಿದರು. ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಚಂದ್ರಶೇಖರ್ ವಂದಿಸಿದರು.