ಮಡಿಕೇರಿ, ಜ. 5: ಒಂದು ತಿಂಗಳ ಹಿಂದೆ ಮಾದಾಪುರದ ಜಂಬೂರು ಗ್ರಾಮದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚೇತರಿಕೆಯ ಘೋಷಣೆಯೊಂದಿಗೆ ಕಲ್ಪಿಸಿರುವ ಮೂರು ಪ್ರವಾಸಿ ಮಿನಿ ಬಸ್‍ಗಳ ಪ್ರಯಾಣ ದರ ಏರಿಸಲಾಗಿದೆ.

ಜಿಲ್ಲೆಯ ಮೂರು ಮಾರ್ಗಗಳ ಪ್ರವಾಸಿಗರ ಪ್ರಯಾಣ ವೆಚ್ಚ ಒಬ್ಬರಿಗೆ ರೂ. 400 ರಂತೆ ಪ್ರಕಟಿಸಿದ್ದನ್ನು, ಕೇವಲ ಒಂದೇ ತಿಂಗಳಿನಲ್ಲಿ ರೂ. 450ಕ್ಕೆ ಏರಿಸಿ ಇಲಾಖೆಯು ಪ್ರಕಟಣೆ ಹೊರಡಿಸಿದೆ. ಮಾತ್ರವಲ್ಲದೆ ಪ್ರತಿಯೊಬ್ಬ ಪ್ರವಾಸಿಯು ಪ್ರವಾಸಿ ಕೇಂದ್ರದ ಬುಕ್ಕಿಂಗ್ ಏಜೆಂಟ್, ಹೊಟೇಲ್, ಲಾಡ್ಜ್, ರೆಸಾರ್ಟ್ ಮಾಲೀಕರಿಗೆ ಒಬ್ಬ ಪ್ರವಾಸಿಗರಿಗೆ ತಲಾ 50ರಂತೆ ಕಮಿಷನ್ ನೀಡಬೇಕೆಂದು ಸೂಚಿಸಲಾಗಿದೆ.

ಅಲ್ಲದೆ ಮೂರು ಬಸ್‍ಗಳ ಪೈಕಿ ಒಂದು ಬಸ್‍ನ್ನು ಕುಶಾಲನಗರ ಜನತೆಯ ಬೇಡಿಕೆಯಂತೆ, ಮಡಿಕೇರಿ ಬದಲಿಗೆ ಕುಶಾಲನಗರದಿಂದಲೇ ಸಂಚರಿಸಲು ಗಮನ ಹರಿಸುವಂತೆ ರಾಜ್ಯ ಪ್ರವಾಸೋದ್ಯಮ ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ.