ಗೋಣಿಕೊಪ್ಪ ವರದಿ, ಜ. 5: ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಅಪರಿಚಿತ ವ್ಯಕ್ತಿಗೆ ಮಡಿಕೇರಿ ಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವಾರಸುದಾರರು ಇದ್ದಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಗಾಯಾಳುವಿಗೆ ಅಂದಾಜು 60 ವರ್ಷ ವಯಸ್ಸಾಗಿದ್ದು, ಅಂದಾಜು 5 - 6 ಅಡಿ ಎತ್ತರವಿದ್ದಾರೆ. ಬಿಳಿ ಬಣ್ಣದ ಕುರುಚಲು ಗಡ್ಡವಿದೆ. ಅಪಘಾತ ಸಂದರ್ಭ ಬೂದು ಬಣ್ಣದ ಪ್ಯಾಂಟ್, ಶರ್ಟ್ ಧರಿಸಿದ್ದರು.

ತಲೆಗೆ ಗಂಭೀರ ಪೆಟ್ಟು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಇದರಿಂದಾಗಿ ಅವರ ಗುರುತು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ.

ಡಿಸೆಂಬರ್ 28 ರಂದು ಪೊನ್ನಂಪೇಟೆ ಕೊಡವ ಸಮಾಜ ಎದುರಿನ ಮುಖ್ಯರಸ್ತೆಯಲ್ಲಿ ರಸ್ತೆ ದಾಟುತಿದ್ದ ಸಂದರ್ಭ ಕಾರ್ತಿಕ್ ಎಂಬುವವರು ಚಾಲಿಸುತ್ತಿದ್ದ ಕಾರು ಡಿಕ್ಕಿಯಾಗಿತ್ತು. ನಂತರ ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕೃಷ್ಣ ಕಾಲೋನಿ ನಿವಾಸಿ ಮಣಿಕಂಠ ನೀಡಿದ ದೂರಿನಂತೆ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕ ಕಾರ್ತಿಕ್ ವಿರುದ್ದ ದೂರು ದಾಖಲಾಗಿದೆ. ವಾರಸುದಾರರು ಪೊನ್ನಂಪೇಟೆ ಪೊಲೀಸ್ ಠಾಣೆ ಸಂಖ್ಯೆ 08274 249044 ಸಂಪರ್ಕಿಸಬಹುದಾಗಿದೆ.