ಮಡಿಕೇರಿ, ಜ. 5: ಕೇವಲ ಅಂಕಗಳನ್ನು ಗಳಿಸುವದಕಷ್ಟೇ ಶಿಕ್ಷಣ ಸೀಮಿತವಾಗಿರಬಾರದು, ಜೀವನದ ಪಾಠವನ್ನೂ ಅದು ಕಲಿಸುವಂತಾಗಬೇಕು ಎಂದು ಅಭಿಮನ್ಯು ಅಕಾಡೆಮಿಯ ಮುಖ್ಯಸ್ಥ, ಅಂತರ್ರಾಷ್ಟ್ರೀಯ ಅಥ್ಲೀಟ್ ಅರ್ಜುನ್ ದೇವಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಎಂಬುದು ಪ್ರಮುಖ ಘಟ್ಟವಾಗಿದೆ. ಆದರೆ ಆಧುನೀಕರಣದಿಂದಾಗಿ ಇಂದಿನ ಶಿಕ್ಷಣದ ವ್ಯವಸ್ಥೆಯಲ್ಲಿ ಬೋಧನಾ ಕ್ರಮಗಳು ಬದಲಾವಣೆಯನ್ನು ಕಂಡಿದ್ದು, ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಶೈಕ್ಷಣಿಕ ಕ್ಷೇತ್ರ ವಿದ್ಯಾರ್ಥಿಗಳಿಗೆ ಜೀವನದ ಪಾಠವನ್ನು ಬೋಧಿಸುವ ಕಾರ್ಯವನ್ನು ಕೂಡ ಮಾಡಬೇಕಾಗಿದೆ ಎಂದು ಅರ್ಜುನ್ ದೇವಯ್ಯ ತಿಳಿಸಿದರು.
ಸ್ವಾಮಿ ವಿವೇಕಾನಂದರು ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಕರೆ ನೀಡಿ ಎಷ್ಟೋ ವರ್ಷಗಳೇ ಕಳೆದಿದೆ. ಜಪಾನ್‍ನಂತಹ ದೇಶಗಳು ಆದರ್ಶ ವ್ಯಕ್ತಿಯ ಮಾತಿನ ಸದುಪಯೋಗ ಪಡೆದುಕೊಳ್ಳುತ್ತಿದೆ, ಆದರೆ ನಮ್ಮ ದೇಶ ಅಳವಡಿಸಿಕೊಂಡಿಲ್ಲ ಎಂದು ವಿಷಾದಿಸಿದರು.
ಅನುಭವ ಎನ್ನುವದು ದೊಡ್ಡ ಮಾರ್ಗದರ್ಶನವಿದ್ದಂತೆ, ನಾವು ಏನನ್ನು ಕಲಿಯುತ್ತೇವೋ ಅದನ್ನು ಅನುಭವಿಸಿ ಮತ್ತೊಬ್ಬರಿಗೆ ತಿಳಿಸುವುದೇ ಜೀವನದ ನಿಜವಾದ ಯಶಸ್ಸು. ಆದರೆ ಒಂದು ದಿನದ ಯಶಸ್ಸಿಗಿಂತ ಶಾಶ್ವತವಾಗಿ ಪಡೆಯುವ ಯಶಸ್ಸೆ ದೊಡ್ಡದು ಎಂದು ಅರ್ಜುನ್ ದೇವಯ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಸಾಧಿಸುವ ಮನೋಭಾವವನ್ನು ಹೆಚ್ಚಿಸಿಕೊಳ್ಳಬೇಕು ಹೊರತು ತಮ್ಮಲ್ಲಿರುವ ಮನೋಸ್ಥಿತಿಯನ್ನು ಕುಗ್ಗಲು ಬಿಡಬಾರದು. ನಿರಂತರ ಪ್ರಯತ್ನ ಮತ್ತು ಪರಿಶ್ರಮದ ಮೂಲಕ ತಮ್ಮ ಗುರಿಯನ್ನು ತಲುಪಬೇಕು. ಪರಿಶ್ರಮವಿಲ್ಲದ ಯಾವ ಕಾರ್ಯಗಳು ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ. ಮಾಡುವ ಪ್ರತಿ ಕಾರ್ಯದಲ್ಲಿ ಸಾರ್ಥಕತೆಯನ್ನು ಕಂಡುಕೊಂಡಾಗ ಮಾತ್ರ ಉತ್ತಮ ಜೀವನವನ್ನು ನಡೆಸಲು ಸಾಧ್ಯ ಎಂದರು.
ಪೋಷಕರು ತಮ್ಮ ಮಕ್ಕಳನ್ನು ಇತರರೊಡನೆ ಹೋಲಿಕೆ ಮಾಡದೆ, ಅವರ ಪ್ರತಿ ಬೆಳವಣಿಗೆಯಲ್ಲು ಸಹಕಾರಿಯಾಗಬೇಕು. ಅದೇ ರೀತಿ ಮಕ್ಕಳು ತಂದೆ, ತಾಯಿಯರೊಡನೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಕೆಂದು ಅರ್ಜುನ್ ದೇವಯ್ಯ ಸಲಹೆ ನೀಡಿದರು.
ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ಮಣವಟ್ಟೀರ ಚಿಣ್ಣಪ್ಪ, ಕಾರ್ಯದರ್ಶಿ ಅರೆಯಡ ರಮೇಶ್, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜ್ಜಿರ ಅಯ್ಯಪ್ಪ, ವಿದ್ಯಾಸಂಸ್ಥೆಯ ವಕ್ತಾರ ಕಾಳಪ್ಪ, ಪ್ರಾಂಶುಪಾಲರಾದ ಕಲ್ಮಾಡಂಡ ಸರಸ್ವತಿ ಹಾಗೂ ಆಡಳಿತಾಧಿಕಾರಿ ಪೊನ್ನಮ್ಮ ಉಪಸ್ಥಿತರಿದ್ದರು.
ಸುಮಾರು ಮೂರು ಗಂಟೆಗಳ ಕಾಲ ಉಪನ್ಯಾಸ ನೀಡಿದ ಅರ್ಜುನ್ ದೇವಯ್ಯ ಅವರು ವಿದ್ಯಾರ್ಥಿಗಳಲ್ಲಿ ಹೊಸ ಸ್ಫೂರ್ತಿಯನ್ನು ತುಂಬಿ, ಪೋಷಕರ ಮೆಚ್ಚುಗೆಗೂ ಪಾತ್ರರಾದರು.