ವರದಿ-ಚಂದ್ರಮೋಹನ್

ಕುಶಾಲನಗರ, ಜ. 4: ಕುಶಾಲನಗರದ ಖಾಸಗಿ ವೈದ್ಯ ಡಾ.ದಿಲೀಪ್ ಅವರ ಹತ್ಯೆ ಪ್ರಕರಣ ತನಿಖಾ ಹಂತದಲ್ಲಿಯೇ ತಿರುವು ಪಡೆದುಕೊಂಡಿದೆ. ಮಡಿಕೇರಿಯ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆನ್ನಲ್ಲೇ ಇದೀಗ ವೈದ್ಯರ ಹತ್ಯೆ ಪ್ರಕರಣದ ತನಿಖಾಧಿಕಾರಿ ಸೇರಿದಂತೆ ಒಟ್ಟು 23 ಪೊಲೀಸರ ವಿರುದ್ದ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿಯ ಕೃಷ್ಣ ಮತ್ತಿತರರನ್ನು ಮೈಸೂರು ಮತ್ತು ಮಡಿಕೇರಿ ಪೊಲೀಸರು ವಿಚಾರಣೆಗೆ ಒಳಪಡಿಸಿದ ನಡುವೆ ಕೃಷ್ಣ ಅವರ ಪುತ್ರ ಜಯಕುಮಾರ್ ಎಂಬಾತ ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂಧ ಮೃತನ ಸಹೋದರ ತನಿಖಾ ತಂಡದ ಒಟ್ಟು 23 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ದೂರು ದಾಖಲಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಜಯಕುಮಾರ್ ಅವರನ್ನು ಮೊದಲು ತನಿಖಾ ತಂಡ ವಿಚಾರಣೆಗೆ ಒಳಪಡಿಸಿತ್ತು ಎನ್ನಲಾಗಿದೆ.

ಪ್ರಕರಣದ ತನಿಖಾಧಿಕಾರಿ ಸೇರಿದಂತೆ ಬೈಲುಕೊಪ್ಪ, ಬೆಟ್ಟದಪುರ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿಗಳು ತನ್ನ ಸಹೋದರನಿಗೆ ಹಿಂಸೆ ನೀಡಿದ ಹಿನ್ನಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಡಿಕೇರಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಅಲ್ಲದೆ ಪೊಲೀಸರ ವಿರುದ್ಧ ದೌರ್ಜನ್ಯ ಪ್ರಕರಣ ಕೂಡ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.