*ಗೋಣಿಕೊಪ್ಪಲು, ಜ. 5: ದಕ್ಷಿಣ ಕೊಡಗಿನ ಆನೆಚೌಕೂರು-ಗೋಣಿಕೊಪ್ಪಲು ನಡುವಿನ ಅಂತರರಾಜ್ಯ ಹೆದ್ದಾರಿ ಸಣ್ಣಪುಟ್ಟ ವಾಹನಗಳು ಸಂಚರಿಸಲು ಸಾಧ್ಯವಾಗದ ರೀತಿಯಲ್ಲಿ ಭಾರೀ ಪ್ರಮಾಣದ ಹೊಂಡಬಿದ್ದಿದೆ. ಆನೆಚೌಕೂರುನಿಂದ ಗೋಣಿಕೊಪ್ಪಲಿನವರೆಗೆ ಸುಮಾರು 17 ಕಿ.ಮೀ. ರಸ್ತೆಯೇ ಇಲ್ಲದಂತಾಗಿದೆ.
ಈ ಭಾಗದ ರಸ್ತೆ ಕಳೆದ ಜುಲೈವರೆಗೆ ಉತ್ತಮವಾಗಿತ್ತು. ಆಗಸ್ಟ್ನಲ್ಲಿ ಬಿದ್ದ ಭಾರೀ ಮಳೆಗೆ ಹಾಳಾಯಿತು. ಇದೀಗ ಮಳೆ ನಿಂತು 6 ತಿಂಗಳು ಕಳೆದರೂ ರಸ್ತೆಗೆ ಮತ್ತೆ ಡಾಂಬರೀಕರಣ ಮಾಡಲು ಮುಂದಾಗಿಲ್ಲ. ಇದರಿಂದ ಕಳೆದ ಒಂದು ತಿಂಗಳ ಅವಧಿಯಲ್ಲಿ ತಿತಿಮತಿಯಿಂದ ದೇವರಪುರದವರೆಗಿನ 3 ಕಿ.ಮೀ ದೂರದಲ್ಲಿ ಒಂದು ಅಂದಾಜಿನ ಪ್ರಕಾರ 37 ಬೈಕ್ಗಳು ಬಿದ್ದು ಬೈಕ್ ಸವಾರರಿಗೆ ಪ್ರಾಣಾಪಾಯ ತಂದೊಡ್ಡಿದೆ. 17 ಕಾರುಗಳು ಮಗುಚಿ ಬಿದ್ದಿವೆ. 13 ಮಿನಿ ಲಾರಿಗಳು ಉರುಳಿ ಬಿದ್ದಿವೆ. ಆದರೆ ಸಾವುಗಳು ಸಂಭವಿಸದೇ ಇದ್ದುದರಿಂದ ಯಾವದೇ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ. ಇಷ್ಟೆಲ್ಲ ಅನಾಹುತಗಳು ಸಂಭವಿಸುತ್ತಿದ್ದರೂ ಲೋಕೋಪಯೋಗಿ ಇಲಾಖೆ ಇತ್ತ ಗಮನಹರಿಸುತ್ತಿಲ್ಲ. ಇತ್ತೀಚಿಗೆ ಇಲಾಖೆ ಇಂಜಿನಿಯರ್ ಹಾಗೂ ಗುತ್ತಿಗೆದಾರರೊಬ್ಬರು ರೋಡ್ ರೋಲರ್ ಒಂದನ್ನು ತಂದು ಗುಂಡಿಗೆ ತೇಪೆ ಹಾಕುವ ಕೆಲಸದಲ್ಲಿ ತೊಡಗಿದ್ದರು. ಇದು ತೀರ ಕಳಪೆ ಕಾಮಗಾರಿಯಾಗಿತ್ತು. ಇದನ್ನು ವಿರೋಧಿಸಿದ ಸಾರ್ವಜನಿಕರು ಗುಣಮಟ್ಟದ ಕಾಮಗಾರಿ ನಡೆಸುವಂತೆ ಒತ್ತಾಯಿಸಿದ್ದರು. ಈ ಮಾರ್ಗ ಮೈಸೂರು, ತಲಚೇರಿ, ಕಣ್ಣೂರು ಅಂತರರಾಜ್ಯ ಹೆದ್ದಾರಿಯಾಗಿದೆ. ಇಲ್ಲಿ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ರಸ್ತೆಗೆ ಕೂಡಲೇ ಡಾಂಬರೀಕರಣ ಕಾಮಗಾರಿ ಆರಂಭಿಸದಿದ್ದರೆ ರಸ್ತೆ ತಡೆ ಚಳುವಳಿ ನಡೆಸಿ ತೀವ್ರವಾಗಿ ಪ್ರತಿಭಟನೆ ನಡೆಸಲಾಗುವದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.