ವೀರಾಜಪೇಟೆ, ಜ. 5. ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಸ್ಟೂಡೆಂಟ್ ಆಕ್ಟಿವಿಟಿ ಕ್ಲಬ್‍ನಿಂದ ಈಚೆಗೆ ಬ್ರಹ್ಮಗಿರಿ ವನ್ಯಧಾಮದ ನರಿಮಲೆ ಪರ್ವತಕ್ಕೆ ಚಾರಣವನ್ನು ಆಯೋಜಿಸಲಾಗಿತ್ತು.
ಸುಮಾರು 46 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಚಾರಣದ ವಿಶಿಷ್ಟ ಅನುಭವದೊಂದಿಗೆ, ಪರಿಸರ ಕುರಿತು ಅರಿವು ಪಡೆದುಕೊಂಡರು. ಉಪನ್ಯಾಸಕರಾದ ಹೇಮಂತ್, ವಿವೇಕ್ ಹಾಗೂ ಅಶ್ವಿನಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಅರಣ್ಯ ಹಾಗೂ ವನ್ಯಮೃಗಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಚಾರಣದ ನೇತೃತ್ವವನ್ನು ಕೂರ್ಗ ವೈಲ್ಡ್ ಲೈಫ್ ಸೊಸೈಟಿಯ ಬೋಸ್ ಮಾದಪ್ಪ ಹಾಗೂ ಉರಗ ತಜ್ಞ ಸತೀಶ್ ವಹಿಸಿದ್ದರು.
ಜರಿತೊರೆ, ಹಳ್ಳದಿಣ್ಣೆ, ಅರಣ್ಯ ಸೇರಿದಂತೆ ಪರ್ವತದ ಕಡಿದಾದ ಹಾದಿಯಲ್ಲಿ ಬ್ರಹ್ಮಗಿರಿ ಅಭಯಾರಣ್ಯದಲ್ಲಿ ಎತ್ತರದ ಶಿಖರ ನರಿಮಲೆಯ ಕಡೆಗಿನ ಪಯಣ ಮುಂದುವರಿಯಿತು. ಜೀವ ಜಗತ್ತಿನ ಉಳಿವಿಗೆ ಅರಣ್ಯಗಳು ನೀಡುತ್ತಿರುವ ಕೊಡುಗೆಗಳನ್ನು ತಿಳಿಯಲಾಯಿತು. ಕಾಡುಪ್ರಾಣಿ ಹಾಗೂ ಸಸ್ಯ ರಾಶಿಗಳ ಪರಿಚಯ ಮಾಡಿದ್ದಲ್ಲದೆ, ಅವುಗಳಲ್ಲಿನ ಕೆಲವು ವೈಶಿಷ್ಟ್ಯಗಳನ್ನು ತಿಳಿದರು.
ಅಪರಾಹ್ನ 12.30ಕ್ಕೆ ನರಿಮಲೆ ಪರ್ವತದ ತುದಿಯನ್ನು ತಲಪುವದರೊಂದಿಗೆ ಚಾರಣದ ಮೊದಲ ಹಂತ ಮುಕ್ತಾಯಗೊಂಡಿತು. ಅಲ್ಲಿಯೇ ಮಧ್ಯಾಹ್ನದ ಉಪಹಾರವನ್ನು ಸೇವಿಸಿದ ವಿದ್ಯಾರ್ಥಿಗಳು ತಾವು ತೆಗೆದುಕೊಂಡು ಹೋಗಿದ್ದ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯವಸ್ತುಗಳೊಂದಿಗೆ ಮಧ್ಯಾಹ್ನ 1:30 ಕ್ಕೆ ಮರಳಿ ಇರ್ಪು ಜಲಪಾತದ ಕಡೆಗೆ ಪ್ರಯಾಣ ಬೆಳೆಸಿದರು. ಸುಮಾರು 4 ಗಂಟೆಯ ವೇಳೆಗೆ ಇರ್ಪು ಜಲಪಾತ ಸಮೀಪ ಬಂದ ವಿದ್ಯಾರ್ಥಿಗಳು ಚಾರಣದ ನೇತೃತ್ವವನ್ನು ವಹಿಸಿಕೊಂಡು ಹಾದಿಯುದ್ದಕ್ಕೂ ಮಾಹಿತಿ ನೀಡಿದ ಬೋಸ್ ಮಾದಪ್ಪ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗೆ ಧನ್ಯವಾದವನ್ನು ಅರ್ಪಿಸಿದರು. ಬಳಿಕ ಬಸ್ಸನ್ನೇರಿ ವಿನೂತನ ಅನುಭವಕ್ಕೆ ಸಾಕ್ಷಿಯಾದ ಚಾರಣದ ಸುಂದರ ಕ್ಷಣಗಳನ್ನು ಮೆಲುಕು ಹಾಕುತ್ತಾ ತಮ್ಮ ಊರಿನ ಕಡೆಗೆ ಪ್ರಯಾಣ ಬೆಳೆಸಿದರು.