ಕೂಡಿಗೆ, ಜ. 5: ಹೋಬಳಿಯ ಆಯಾ ಆರ್.ಎಂ.ಸಿ.ಯಲ್ಲಿ ಭತ್ತ ಖರೀದಿ ಕೇಂದ್ರವನ್ನು ತೆರೆಯಲಾಗಿದ್ದು, ಇದರ ಅವಧಿ ವಿಸ್ತರಣೆಗಾಗಿ ಕುಶಾಲನಗರ ಹೋಬಳಿಯ ರೈತರುಗಳು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಆಹಾರ ಇಲಾಖೆಯ ವತಿಯಿಂದ ಕೆಲವು ಆರ್.ಎಂ.ಸಿ. ಕೇಂದ್ರಗಳಲ್ಲಿ ಆರಂಭಿಸಿರುವ ಭತ್ತ ಖರೀದಿ ಕೇಂದ್ರದಲ್ಲಿ ಭತ್ತವನ್ನು ಖರೀದಿಸಿಕೊಳ್ಳುತ್ತಿಲ್ಲ. ಕುಶಾಲನಗರ ಹೋಬಳಿ ವ್ಯಾಪ್ತಿಯ ಹಾರಂಗಿ ಅಚ್ಚುಕಟ್ಟು ಪ್ರದೇಶವಾಗಿದ್ದು, ಈ ಪ್ರದೇಶದ ನಾಲ್ಕು ಗ್ರಾ.ಪಂ. ವ್ಯಾಪ್ತಿಯ ಇಪ್ಪತ್ತಕ್ಕೂ ಹೆಚ್ಚು ಉಪಗ್ರಾಮಗಳು ಹಾರಂಗಿ ನೀರನ್ನು ಅವಲಂಭಿಸಿ ಭತ್ತವನ್ನು ಬೆಳೆಯಲಾಗಿದೆ. ಆದರೆ ಸರ್ಕಾರ ಹಾಗೂ ಜಿ.ಪಂ. ಡಿ. 31ಕ್ಕೆ ಭತ್ತ ಖರೀದಿಗೆ ಕೊನೆಯ ದಿನವಾಗಿ ನಿಗದಿಪಡಿಸಲಾಗಿದ್ದು, ಸೋಮವಾರಪೇಟೆ ತಾಲೂಕಿನಾದ್ಯಂತ ಭತ್ತದ ನಾಟಿಯನ್ನು ಒಂದು ತಿಂಗಳು ತಡವಾಗಿ ನಾಟಿ ಮಾಡಲಾಗಿದೆ. ಇದೀಗ ಭತ್ತದ ಬೆಳೆಯು ಜನವರಿ ಅಂತ್ಯದವರೆಗೂ ಕಟಾವು ನಡೆಯಲಿದೆ. ಆದರೆ ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಭತ್ತದ ಬೆಳೆಯ ಕಟಾವು ಇತ್ತೀಚೆಗಷ್ಟೇ ಪ್ರಾರಂಭಗೊಂಡಿದೆ. ಭತ್ತವನ್ನು ಖರೀದಿ ಕೇಂದ್ರಕ್ಕೆ ತರಲು ರೈತರು ಸಿದ್ಧರಾದರೂ, ಅವಧಿ ಮುಗಿದಿರುವ ಕಾರಣ ಭತ್ತ ಖರೀದಿ ಕೇಂದ್ರದಲ್ಲಿ ಭತ್ತವನ್ನು ಖರೀದಿಸಲು ನಿರಾಕರಿಸುತ್ತಿದ್ದಾರೆ. ಆದ್ದರಿಂದ ಈ ಭಾಗದ ರೈತರು ಭತ್ತ ಮಾರಾಟ ಮಾಡಲು ಸಿದ್ಧರಿದ್ದು, ಭತ್ತ ಖರೀದಿ ಕೇಂದ್ರದ ಅವಧಿಯನ್ನು ವಿಸ್ತರಿಸಬೇಕೆಂದು ಈ ಭಾಗದ ಸಹಕಾರ ಸಂಘದ ಅಧ್ಯಕ್ಷರನ್ನೊಳಗೊಂಡಂತೆ ರೈತರುಗಳು ಆಗ್ರಹಿಸಿದ್ದಾರೆ.

ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳು ಭತ್ತ ಖರೀದಿ ಕೇಂದ್ರವನ್ನು ತೆರೆದಿದ್ದರೂ, ರೈತರಿಗೆ ಉಪಯೋಗವಾಗುವ ಬೆಂಬಲ ಬೆಲೆಯೊಂದಿಗೆ ಅವಧಿಯನ್ನು ಜನವರಿ ಅಂತ್ಯದವರೆಗೆ ವಿಸ್ತರಿಸುವದರ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಚಂದ್ರಶೇಖರ್, ಹೆಬ್ಬಾಲೆ ಸಹಕಾರ ಸಂಘದ ಅಧ್ಯಕ್ಷ ಪರಮೇಶ್ ಹಾಗೂ ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಕೃಷ್ಣೇಗೌಡ ಸೇರಿದಂತೆ ಇಲ್ಲಿನ ರೈತರು ಆಗ್ರಹಿಸಿದ್ದಾರೆ.

ಭತ್ತ ಕೇಂದ್ರದ ಅಧಿಕಾರಿ ರವಿ ಮಾತನಾಡಿ, ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಸರ್ಕಾರದಿಂದ ಆದೇಶ ಬಂದ ನಂತರ ಅದರಂತೆ ವ್ಯವಹರಿಸುವದಾಗಿ ಹೇಳಿದರು.