ಸೋಮವಾರಪೇಟೆ, ಜ. 5: ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಾ. 26 ರಂದು ಕೊಡ್ಲಿಪೇಟೆಯ ಬಸ್ ನಿಲ್ದಾಣದಲ್ಲಿ ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕರವೇ ಹೋಬಳಿ ಅಧ್ಯಕ್ಷ ಡಿ.ಪಿ. ಭೂಪಾಲ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರವೇ ಕೊಡ್ಲಿಪೇಟೆ ಹೋಬಳಿ ಘಟಕದಿಂದ ತಾ. 26 ರಂದು ಪೂರ್ವಾಹ್ನ 9.30 ಗಂಟೆಗೆ ಧ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವದು ಎಂದರು.

ಇದೇ ದಿನ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಹಾಗೂ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗೆ ಅನುಕೂಲವಾಗುವಂತೆ, ಸಾರ್ವಜನಿಕರ ಸಹಕಾರದಿಂದ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗುವದು ಎಂದು ತಿಳಿಸಿದರು. ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೊಡಗು ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಪ್ರಥಮ ಬಹುಮಾನವಾಗಿ ರೂ. 10 ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ತಲಾ ರೂ. 7,500 ಹಾಗೂ 5,000 ನಗದು ಮತ್ತು ಟ್ರೋಫಿ ನೀಡಲಾಗುವದು ಎಂದು ಮಾಹಿತಿಯಿತ್ತರು.

ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ತಾ. 20 ರೊಳಗೆ ಮೊ: 9449729441, 9449718241 ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ಕನ್ನಡ ಗೀತೆಗಳ ನೃತ್ಯಕ್ಕೆ ಮಾತ್ರ ಅವಕಾಶವಿದ್ದು, ಮೊದಲು ನೋಂದಾಯಿಸಿಕೊಳ್ಳುವ 20 ತಂಡಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವದು ಎಂದರು.

ಗೋಷ್ಠಿಯಲ್ಲಿ ವೇದಿಕೆಯ ಕೊಡ್ಲಿಪೇಟೆ ಹೋಬಳಿ ಕಾರ್ಯದರ್ಶಿ ಡಿ.ಆರ್. ವೇದಕುಮಾರ್, ನಗರಾಧ್ಯಕ್ಷ ಸಮೀವುಲ್ಲಾ, ಸಂಚಾಲಕ ಭಾಸ್ಕರ್ ಆಚಾರ್ಯ ಉಪಸ್ಥಿತರಿದ್ದರು.