ಸುಂಟಿಕೊಪ್ಪ, ಜ. 5: ರಸ್ತೆಗೆ ಅಡ್ಡಬಂದ ದನದಿಂದ ಪಾರಾಗಲು ಯತ್ನಿಸಿ ವಿಫಲವಾದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತೋಡಿಗೆ ಬಿದ್ದಿರುವ ಘಟನೆ ವರದಿಯಾಗಿದೆ. ಮಾದಾಪುರ ಸಮೀಪದ ಮೂವತ್ತೊಕ್ಲುವಿನ ನಿವಾಸಿಗಳಾದ ರಚನ್ ಹಾಗೂ ರಾಬಿನ್ ಎಂಬುವವರು (ಕೆಎ.12ಎನ್ 1081) ಮಾರುತಿ ಅಲ್ಟೋ ಕಾರಿನಲ್ಲಿ ಇಂದು ಸಂಜೆ 6.45ರ ಸಮಯದಲ್ಲಿ ಕುಶಾಲನಗರದಿಂದ ಸುಂಟಿಕೊಪ್ಪ ಕಡೆಗೆ ಬರುತ್ತಿದ್ದಾಗ 7ನೇ ಹೊಸಕೋಟೆಯ ಕೆಳಭಾಗದಲ್ಲಿರುವ ಮಾರುತಿ ನಗರದ ಮುಖ್ಯರಸ್ತೆ ಬದಿಯಲ್ಲಿ ಇದ್ದಕ್ಕಿದ್ದಂತೆ ದನವೊಂದು ಅಡ್ಡಬಂದಿದೆ. ದನಕ್ಕೆ ಅಪ್ಪಳಿಸುವುದನ್ನು ತಪ್ಪಿಸಲು ಯತ್ನಿಸಿದಾಗ ಕಾರು ಚಾಲಾಯಿಸುತ್ತಿದ್ದ ರಚನ್ ಅವರ ನಿಯಂತ್ರಣ ಕಳೆದುಕೊಂಡು ಕಾರು ರಸ್ತೆ ಬದಿಯ ತೋಡಿನೊಳಗೆ ಬಿದ್ದಿದೆ. ಅದೃಷ್ಟವಶಾತ್ ಚಾಲಕ ರಚನ್ ಹಾಗೂ ಅವರೊಂದಿಗೆ ಕಾರಿನಲ್ಲಿದ್ದ ರಾಬಿನ್ ಸಣ್ಣಪುಟ್ಟ ಗಾಯಕ್ಕೊಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.