ಕುಶಾಲನಗ, ಜ. 5: ವಿಶ್ವ ಮಾನವ ಸಂದೇಶವನ್ನು ಯುವ ಪೀಳಿಗೆಗೆ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಹಾಸನ ಶಾಖೆಯ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ಒಕ್ಕಲಿಗರ ಯುವ ವೇದಿಕೆಯ ನಾಲ್ಕನೇ ವರ್ಷದ ಅಂಗವಾಗಿ ಕುಶಾಲನಗರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡಿದರು. ರಾಷ್ಟ್ರಕವಿ ಕುವೆಂಪು ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಅರಿಯಬೇಕಾಗಿದೆ ಎಂದು ಅವರು ಕರೆ ನೀಡಿದರು.
ರಾಷ್ಟ್ರಕವಿ ಕುವೆಂಪು ಕುರಿತು ಭಾಷಣ ಮಾಡಿದ ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಜಮೀರ್ ಅಹಮದ್, ಹುಟ್ಟುತ್ತ ವಿಶ್ವಮಾನವರಾಗಿ ಹುಟ್ಟುವ ಮಕ್ಕಳನ್ನು ಬೆಳೆಯುತ್ತ ಅಲ್ಪ ಮಾನವರನ್ನಾಗಿಸುತ್ತಿರುವದು ಇತ್ತೀಚಿನ ಬೆಳವಣಿಗೆಯಾಗಿದೆ. ಕುವೆಂಪು ಹೇಳಿದಂತೆ, ಮತ ಮನುಜ ಮತವಾಗಬೇಕು ಪಥ ವಿಶ್ವಪಥವಾಗಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಪಿ. ಚಂದ್ರಕಲಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಶೇಖರ್ ಪೇಂಟ್ಸ್ , ಸಮಾಜ ಸೇವಕ ಸೋಮವಾರಪೇಟೆ ರವೀಂದ್ರ, ವಿದ್ವಾಂಸ ರಾಮಚಂದ್ರಪ್ಪ ಮೇತ್ರಿ, ಯುವ ವೇದಿಕೆ ಪದಾಧಿಕಾರಿಗಳಾದ ಬಿ.ಬಿ. ಜಗದೀಶ್, ಗಿರೀಶ್ ಗೌಡ, ಭಾನುಪ್ರಕಾಶ್, ಎಂ.ಕೆ. ಮಂಜುನಾಥ್, ಕೆ. ಕೆ.ಚೇತನ್, ಅನಿಲ್ ಕುಮಾರ್, ಯಶವಂತ್ ಇದ್ದರು. ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಎಂ. ಡಿ. ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುವೆಂಪು ರಚಿತ ಕಾವ್ಯಗಳನ್ನು ಕಲಾವಿದರು ಹಾಡಿದರು. ಒಕ್ಕಲಿಗ ಸಮಾಜದ ಸಾಧಕರಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್, ಹಾಸನದ ಪೊಲೀಸ್ ಅಧಿಕಾರಿ ಎಂ.ವಿ. ಗೋವಿಂದರಾಜು, ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯ ಡಾ.ಹರ್ಷ ಅವರನ್ನು ಸನ್ಮಾನಿಸಲಾಯಿತು. ಮಕ್ಕಳು ಹಾಗೂ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕಿ ಗಾಯತ್ರಿ ನಿರೂಪಿಸಿದರು. ಯುವ ವೇದಿಕೆ ನಿರ್ದೇಶಕ ಚೇತನ್ ಸ್ವಾಗತಿಸಿದರು. ಅನಿಲ್ ಕುಮಾರ್ ವಂದಿಸಿದರು.