ಮಡಿಕೇರಿ, ಜ. 5 : ಜಿಲ್ಲಾ ತಂಬಾಕು ನಿಯಂತ್ರಣ ಕೋಶ ವತಿಯಿಂದ ಶನಿವಾರ ನಗರದ ವಿವಿಧ ಅಂಗಡಿಗಳ ಮೇಲೆ ಮಿಂಚಿನ ಕಾರ್ಯಾಚರಣೆ ನಡೆಸಿದರು.

ಪ್ರಮುಖ ರಸ್ತೆಗಳಲ್ಲಿ ಪಾನ್‍ಶಾಪ್, ಹೊಟೇಲ್, ಕಿರಾಣಿ ಅಂಗಡಿಗಳ ಮೇಲೆ ಈ ತಂಡ ಕೋಟ್ಪಾ 2003ರ ಧಾಳಿ ನಡೆಸಲಾಯಿತು. ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಹಾಗೂ ಗುಟ್ಕಾ ಪ್ಯಾಕೆಟ್‍ಗಳನ್ನು ಬಹಿರಂಗವಾಗಿ ಪ್ರದರ್ಶಿಸಿ ಮಾರಾಟ ಮಾಡುತ್ತಿರುವದು ಕಂಡುಬಂದು ಇದಕ್ಕೆ ಕಡಿವಾಣ ಹಾಕಲು ಅಂಗಡಿಗಳ ಮಾಲೀಕರಿಗೆ ಮೊದಲ ಹಂತದಲ್ಲಿ ಎಚ್ಚರಿಕೆ ನೀಡಿ ನೋಟೀಸ್ ಜಾರಿ ಮಾಡಲಾಗಿದೆ ಮತ್ತು ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ದಂಡ ವಿಧಿಸಲಾಯಿತು.

ಹೊಟೇಲ್, ಬಾರ್, ಅಂಗಡಿ ಮತ್ತು ಪಾನ್ ಶಾಪ್‍ಗಳಲ್ಲಿ ತಂಬಾಕು ಸೇವನೆ ಹಾಗೂ ಧೂಮಪಾನ ನಿಷೇಧದ (ಸೆಕ್ಷನ್4) ಮತ್ತು 18 ವಯಸ್ಸಿನೊಳಗಿನ ಮಕ್ಕಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವದು ಅಪರಾಧ (ಸೆಕ್ಷನ್ 6ಎ) ಬಗ್ಗೆ ನಾಮಫಲಕ ಹಾಕುವದು ಕಡ್ಡಾಯವಾಗಿದೆ.

ಈ ಧಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಶಿವಕುಮಾರ್, ಎಂಟಮೋಲಜಿಸ್ಟ್ ಮಂಜುನಾಥ್, ಜಿಲ್ಲಾ ಸಲಹೆಗಾರರಾದ ಪುನೀತಾ ರಾಣಿ, ಸಮಾಜ ಕಾರ್ಯಕರ್ತ ಮಂಜುನಾಥ್ ಆರ್., ಪೋಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯವರು ಭಾಗವಹಿಸಿದ್ದರು.