ಮೂರ್ನಾಡು, ಜ. 5: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಅಡಿಪಾಯವನ್ನು ಜ್ಞಾರ್ನಾಜನೆಯ ಮೂಲಕ ಭದ್ರ ಗೊಳಿಸಿಕೊಂಡಾಗ ಮಾತ್ರ ಭವಿಷ್ಯ ವನ್ನು ಸುಂದರವಾಗಿ ರೂಪಿಸಿ ಕೊಳ್ಳಲು ಸಾಧ್ಯ ಎಂದು ಬೆಂಗಳೂರಿನ ಒಸಿಡಬ್ಲ್ಯುಇಎನ್ ಫೈನಾನ್ಸಿಯಲ್ ಸೊಲ್ಯುಷನ್ಸ್‍ನ ಹಿರಿಯ ಕಾನೂನು ವಿಭಾಗದ ವ್ಯವಸ್ಥಾಪಕ ಅಜ್ಜಿಕುಟ್ಟಿರ ಪೂಣಚ್ಚ ಅಪ್ಪಣ್ಣ ಹೇಳಿದರು.
ವಿದ್ಯಾಸಂಸ್ಥೆಯ ಬಾಚೆಟ್ಟಿರ ಕಮಲು ಮುದ್ದಯ್ಯ ಬಯಲು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಮೂರ್ನಾಡು ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗ ಬೇಕಾದಷ್ಟು ಅವಕಾಶಗಳು ಇವೆ. ಅವುಗಳನ್ನು ತಮ್ಮ ಪ್ರತಿಭೆಗೆ ಅನುಗುಣವಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದ ಪ್ರತಿಫಲ ಉತ್ತಮ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ತಿಳಿಸಿದರು. ಸಮಾರಂಭಕ್ಕೆ ಮೊದಲು ಒಸಿಡಬ್ಲ್ಯುಇಎನ್ ಫೈನಾನ್ಸಿಯಲ್ ಸೊಲ್ಯುಷನ್ಸ್‍ನ ಸಿಎಸ್‍ಆರ್ ನಿಧಿಯಿಂದ ನೀಡಿದ ಸುಮಾರು ರೂ. 25 ಲಕ್ಷ ಮೊತ್ತದ ಪದವಿ ಕಾಲೇಜಿನ ನೂತನ ಕಂಪ್ಯೂಟರ್ ಲ್ಯಾಬ್‍ನ್ನು ಅಜ್ಜಿಕುಟ್ಟಿರ ಪೂಣಚ್ಚ ಅಪ್ಪಣ್ಣ ಉದ್ಘಾಟಿಸಿದರು.
ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ಸಮಾರಂಭದ ಅಧ್ಯಕ್ಷತೆಯ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಅನೇಕ ದಾನಿಗಳು ಧನ ಸಹಾಯ ನೀಡು ವದರ ಮೂಲಕ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದ್ದು, ಅದನ್ನು ಇಲ್ಲಿನ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ದಾನಿಗಳ ಸಹಾಯದಿಂದಲೇ ಸುಸಜ್ಜಿತ ಮೈದಾನ, ಗ್ಯಾಲರಿ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ ಹೀಗೆ ಮಕ್ಕಳ ಅನುಕೂಲಕ್ಕಾಗಿ ಆಯೋಜಿಸಲಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಮಾಳವಿಕ ಅಪ್ಪಣ್ಣ, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚೌರೀರ ಪೆಮ್ಮಯ್ಯ, ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ, ಖಜಾಂಚಿ ಬಡುವಂಡ ಸುಬ್ರಮಣಿ, ನಿರ್ದೇಶಕರಾದ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ನಂದೇಟಿರ ರಾಜ ಮಾದಪ್ಪ, ಈರಮಂಡ ಸೋಮಣ್ಣ, ತೇಲಪಂಡ ಶೈಲಾ, ಪಳಂಗಂಡ ಪೂವಯ್ಯ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕಿ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಎಸ್.ಡಿ. ಪ್ರಶಾಂತ್ ಉಪಸ್ಥಿತರಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನಗಳನ್ನು ವಿತರಿಸಿದರು. ರೇಷ್ಮ, ಎ.ಎಸ್. ರಶ್ಮಿ, ಬಿ.ಎನ್. ಮಮತ ಮತ್ತು ವಿಲ್ಮ ಶಾಲಾ ಮತ್ತು ಕಾಲೇಜು ವರದಿ ವಾಚಿಸಿದರು. ಶ್ರೀರಕ್ಷ ಮತ್ತು ತಂಡ ಪ್ರಾರ್ಥಿಸಿದರು. ಎಸ್.ಡಿ. ಪ್ರಶಾಂತ್ ಸ್ವಾಗತಿಸಿ, ಕುಮುದ ಮತ್ತು ಸಾದೇರ ದರ್ಶನ್ ಕಾರ್ಯಕ್ರಮ ನಿರೂಪಿಸಿ, ಅನುರಾಧ ವಂದಿಸಿದರು. ಕೊನೆಯಲ್ಲಿ ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮ ಮನರಂಜಿಸಿದವು.