ಸಿದ್ದಾಪುರ, ಜ. 3: ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತಾ.8 ಮತ್ತು 9 ರಂದು ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕೊಡಗು ಜನರಲ್ ವರ್ಕರ್ಸ್ ಯೂನಿಯನ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಮಹದೇವ್ ಹಾಗೂ ಉಪ ಕಾರ್ಯದರ್ಶಿ ಹೆಚ್.ಬಿ ರಮೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ವಿವಿಧ ಸಂಘಟನೆಗಳಿಂದ ತಾ.8 ಮತ್ತು 9ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯಲಿದ್ದು, ಜಿಲ್ಲೆಯಲ್ಲೂ ಮುಷ್ಕರ ನಡೆಯಲಿದೆ ಎಂದರು. ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ, ಡೀಸೆಲ್ ಹಾಗೂ ಪೆಟ್ರೋಲ್‍ಗೆ ದುಬಾರಿ ಹಣ ವಸೂಲು ಮಾಡಲಾಗುತ್ತಿದೆ. ಅಡುಗೆ ಅನಿಲದ ಬೆಲೆಯೂ ಕೂಡ ಹೆಚ್ಚಾಗಿದ್ದು, ಜನತೆ ತತ್ತರಿಸಿದ್ದಾರೆ ಎಂದರು.