ಕುಶಾಲನಗರ, ಜ. 3: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 25ನೇ ವರ್ಷದ ಪಂಪ ದೀಪೋತ್ಸವ ಪೂಜಾ ಕಾರ್ಯಕ್ರಮ ನೆರವೇರಿತು.
ಕುಶಾಲನಗರದ ಗೆಳೆಯರ ಬಳಗ ಹಾಗೂ ಶ್ರೀ ಅಯ್ಯಪ್ಪ ಭಕ್ತ ವೃಂದದ ಆಶ್ರಯದಲ್ಲಿ ನಡೆದ ಪೂಜೋತ್ಸವದ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಆವರಣದಲ್ಲಿ ಮಹಿಳಾ ಭಕ್ತಾದಿಗಳು ವಿಧವಿಧದ ವಿನ್ಯಾಸದ ರಂಗೋಲೆಗಳು ಮತ್ತು ದೀಪದ ಅಲಂಕಾರಗಳನ್ನು ಮಾಡಿದ್ದು ಕಂಡುಬಂತು. ಮುಖ್ಯ ಅರ್ಚಕ ಹರಿಭಟ್ ನೇತೃತ್ವದಲ್ಲಿ ಅರ್ಚಕರುಗಳಾದ ಕೃಷ್ಣಮೂರ್ತಿ ಭಟ್, ವಿಷ್ಣುಮೂರ್ತಿಭಟ್, ಸೋಮಶೇಖರ್ಭಟ್ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಅಯ್ಯಪ್ಪ ವೃತಾಧಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಂಪಾವಿಳಕನ್ನು ಕಾವೇರಿ ನದಿಗೆ ಮೆರವಣಿಗೆ ಮೂಲಕ ಕೊಂಡೊಯ್ದು ವಿಸರ್ಜಿಸಿದರು. ಪೂಜೋತ್ಸವದ ಅಂಗವಾಗಿ ಭಕ್ತರಿಗೆ ಅನ್ನದಾನ ನೆರವೇರಿತು. ಈ ಸಂದರ್ಭ ಗೆಳೆಯರ ಬಳಗ, ಮತ್ತಿತರರು ಇದ್ದರು.