ಗೋಣಿಕೊಪ್ಪ ವರದಿ, ಜ. 3: ಸಾವಿರಾರು ಗಣ್ಯರನ್ನು ಸಮಾಜಕ್ಕೆ ನೀಡಿದ ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶತಮಾನೋತ್ಸವದ ಸಂಭ್ರಮದಲ್ಲಿದೆ. ಫೆಬ್ರವರಿ 23 ಹಾಗೂ 24 ರಂದು ಎರಡು ದಿನಗಳ ಕಾರ್ಯಕ್ರಮದ ಮೂಲಕ ಶತಮಾನೋತ್ಸವ ಆಚರಿಸಿಕೊಳ್ಳಲಿದೆ. ಕ್ರೀಡಾಕೂಟ, ಹಿರಿಯ ಶಿಕ್ಷಕರಿಗೆ ಗೌರವ, ಸಾಂಸ್ಕøತಿಕ ಕಾರ್ಯಕ್ರಮದ ಮೂಲಕ ಆಚರಣೆ ನಡೆಯಲಿದೆ.

ತಿತಿಮತಿ ಗ್ರಾಮದಲ್ಲಿ 1916 ರಲ್ಲಿ ಕೊಡಗು ಜಿಲ್ಲಾ ಬೋರ್ಡ್ ವತಿಯಿಂದ ಶಾಲೆ ಆರಂಭವಾಯಿತು. ನಂತರದ ದಿನಗಳಲ್ಲಿ ಗ್ರಾಮದ ದಾನಿ ಮರಾಠಿ ಮಂಜಮ್ಮ 1920 ರಲ್ಲಿ 3.16 ಎಕರೆ ಜಾಗವನ್ನು ದಾನ ಮಾಡಿ, 3 ಕೊಠಡಿಗಳ ಕಟ್ಟಡ ನಿರ್ಮಿಸಿ ಶಾಲೆಯನ್ನು ಮೇಲ್ದರ್ಜೆಗೇರಿಸಿದರು. ಜಾಗ ದಾನ ಮಾತ್ರವಲ್ಲದೆ ಕೊಠಡಿ ನಿರ್ಮಾಣ ಮಾಡಿರುವದರಿಂದ ಸ್ಥಳೀಯರಿಗೆ ಶಿಕ್ಷಣ ಕಲಿಯಲು ಮತ್ತಷ್ಟು ಪ್ರಯೋಜನವಾಯಿತು. ಒಂದನೆ ತರಗತಿಯಿಂದ ಆರಂಭಗೊಂಡ ಶಾಲೆ ಪ್ರಸ್ತುತ 7 ನೇ ತರಗತಿವರೆಗೆ ಶಿಕ್ಷಣ ನೀಡುವ ಕೇಂದ್ರವಾಗಿದೆ. ಕಾಫಿ ಬೆಳೆಗಾರರು, ಗಿರಿಜನ ಸೇರಿದಂತೆ ಕಾರ್ಮಿಕ ವರ್ಗಗಳ ವಿದ್ಯಾದೇಗುಲವಾಗಿ ರೂಪುಗೊಂಡಿದೆ.

ಮಾಯಮುಡಿ ಗ್ರಾಮದ ಜಪ್ಪದ ಕಟ್ಟೆ ಮಠದ ಸಮಿತಿ 1 ಏಕರೆ ಗದ್ದೆಯನ್ನು ಶಾಲೆಗೆ ನೀಡಲಾಯಿತು. ಶಾಲೆಗೆ 2 ಏಕರೆ ಮೈದಾನ ಹೊಂದಿದ್ದು, ಒಟ್ಟು 6.18 ಏಕರೆ ಜಾಗ ಹೊಂದಿದೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ 1952 ರಲ್ಲಿ ಮನೆಯಪಂಡ ಗಣಪತಿ ಅವರು ತಮ್ಮ ಹೆತ್ತವರ ಜ್ಞಾಪಕಾರ್ಥವಾಗಿ ದೊಡ್ಡ ಮಟ್ಟದ ಕಟ್ಟಡ ನಿರ್ಮಿಸಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರು. 1991 ರಲ್ಲಿ ಚೆಪ್ಪುಡೀರ ಪೊನ್ನಮ್ಮ ಅವರು ತಮ್ಮ ಹೆತ್ತವರ ಹೆಸರಿನಲ್ಲಿ ಸಭಾಂಗಣ ನಿರ್ಮಿಸಿ ಕಲೆ, ಸಂಸ್ಕøತಿ ಬಿಂಬಿಸಲು ಅವಕಾಶ ಮಾಡಿಕೊಟ್ಟರು.

ಶಾಲೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಉತ್ಸಾಹದಲ್ಲಿ ಗುಂಬೀರ ಸುಬ್ಮಯ್ಯ ಹಾಗೂ ಚೆಪ್ಪುಡೀರ ಕುಶಾಲಪ್ಪ ಅವರಿಂದ ಮುಖ್ಯದ್ವಾರ, ಗ್ರಾಮಸ್ಥ ಹೆಚ್. ಟಿ. ಸುಂದರ ಕಮಾನು ಗೇಟ್ ನಿರ್ಮಾಣ, ತಡೆಗೋಡೆಯನ್ನು ದಾನಿ ಪಾಲೇಂಗಡ ದೇಚಮ್ಮ, ಅಂದಿನ ಸಂಸದ ಧನಂಜಯ ಕುಮಾರ್, ನಿರ್ಮಿಸಿಕೊಟ್ಟಿದ್ದಾರೆ. ತಿತಿಮತಿ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ 5 ಒಟ್ಟು 5 ಲಕ್ಷ ಅನುದಾನದಲ್ಲಿ ರಂಗಮಂದಿರ ನಿರ್ಮಿಸಲಾಗಿದೆ.

ಸಾವಿರಾರು ಗಣ್ಯರ ವಿದ್ಯಾ ದೇಗುಲ

ಮಾಜಿ ಸಚಿವೆ ಸುಮಾವಸಂತ್, ಮಾಜಿ ಶಾಸಕ ಎ. ಎನ್. ಬೆಳ್ಯಪ್ಪ ಸೇರಿದಂತೆ ಸಾಕಷ್ಟು ಗಣ್ಯರ ವಿದ್ಯಾ ದೇಗುಲವಾಗಿದೆ. ಈ ಭಾಗದಲ್ಲಿ ಗ್ರಾಮ, ಜಿಲ್ಲಾ ಮಟ್ಟದ ಜನಪ್ರತಿನಿಧಿಗಳು, ವೈದ್ಯರು, ವಿಜ್ಞಾನಿ, ಸೇನೆ, ಕ್ರೀಡೆ, ಇಂಜಿನಿಯರ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನ ಪಡೆದುಕೊಂಡಿರುವ ಹಿರಿಯರಿಗೆ ಶಿಕ್ಷಣ ನೀಡಿದ ಶಾಲೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

ನೌಕಾಪಡೆಯ ಕಮಾಂಡೊ ಸಿ.ಎಂ ಬೆಳ್ಯಪ್ಪ, ಅಥ್ಲೆಟ್‍ಗಳಾದ ಸುಗುಣ ಪೊನ್ನಪ್ಪ, ಪಿ. ಸಿ. ಪೊನ್ನಪ್ಪ, ಹಾಕಿ ಪ್ರತಿಭೆ ಚೆಪ್ಪುಡೀರ ಕಾರ್ಯಪ್ಪ, ಇಸ್ರೋ ವಿಜ್ಞಾನಿ ಬಿ.ಎನ್. ಅಶೋಕ್, ಸಿಸಿಎಫ್ ಕರುಣಾಕರ್, ವೈದ್ಯರುಗಳಾದ ಡಾ. ಸಣ್ಣುವಂಡ ಕಾವೇರಪ್ಪ, ಪಾರುವಂಗಡ ಬೆಳ್ಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ. ಆರ್. ಪಂಕಜ, ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಮಂಗಳೂರು ವಿವಿ ಜಂಟಿ ನಿರ್ದೇಶಕ ಎಸ್. ವಿ. ಅಪ್ಪಾಜಿ ಹೀಗೆ ನೂರಾರು ಗಣ್ಯರಿಗೆ ಇದೇ ಶಾಲೆ ಶಿಕ್ಷಣದ ಮೂಲ ಕೇಂದ್ರವಾಗಿದೆ.

2 ದಿನಗಳ ಸಂಭ್ರಮ

ಫೆಬ್ರವರಿ 23 ಹಾಗೂ 24 ರಂದು ಶತಮಾನೋತ್ಸವ ನಡೆಯಲಿದೆ. 23 ರಂದು ತಿತಿಮತಿ ಗ್ರಾಮದ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ. 24 ರಂದು ಶಿಕ್ಷಣ ನೀಡಿದ ಹಳೆಯ 45 ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ, ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ ನಡೆಯಲಿದೆ.

ಸ್ಮರಣ ಸಂಚಿಕೆ

ಆಚರಣೆ ಪ್ರಯುಕ್ತ ಸ್ಮರಣ ಸಂಚಿಕೆ ಬಿಡುಗಡೆ ಮಾಡಲು ನಿರ್ಧರಿಸ ಲಾಗಿದೆ. ಬರಹಗಾರರುಗಳಿಂದ ಲೇಖನ, ಕವನ, ಸೇರಿದಂತೆ ಬರಹಗಳನ್ನು ಆಹ್ವಾನಿಸಲಾಗಿದೆ. ಉತ್ಸವದಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಧನ ಸಹಾಯ ಪಡೆಯಲು ದಾನಿಗಳಿಗೆ ನೇರವಾಗಿ ಹಣ ಸಂದಾಯ ಮಾಡಲು ತಿತಿಮತಿ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಖಾತೆ ತೆರೆಯಲಾಗಿದೆ. ಶತಮಾನೋತ್ಸವ ಆಚರಿಸಲು ಧನಸಹಾಯ ಮಾಡಲಿಚ್ಚಿಸುವ ದಾನಿಗಳು ಖಾತೆ ಸಂಖ್ಯೆ 11052250019092, ಐಎಫ್‍ಸಿ ಕೋಡ್, ಎಸ್‍ವೈಎನ್‍ಬಿ 0001105 ಬಳಕೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9900818806, 9448308018 ಸಂಪರ್ಕಿಸ ಬಹುದಾಗಿದೆ.

ಪ್ರಸ್ತುತ ಆಚರಿಸಲಿರುವ ಶತಮಾನೋತ್ಸವದ ಉಳಿಕೆ ಹಣ ಹಾಗೂ ಶಾಸಕ, ಸಂಸದರ ಅನುದಾನಲ್ಲಿ ಶಾಲೆಯ ಎದುರು ಸುಮಾರು 7 ಲಕ್ಷ ಅನುದಾನದಲ್ಲಿ ತೆರೆದ ಸಭಾಂಗಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಮಾಜಿ ಮುಜರಾಯಿ ಇಲಾಖೆ ಸಚಿವೆ ಶತಮಾನೋತ್ಸವ ಸಮಿತಿಯ ಗೌರವ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಳೆಯ ವಿದ್ಯಾರ್ಥಿಗಳು, ಸ್ಥಳೀಯ ಸಾರ್ವಜನಿಕರು ಹಾಗೂ ಶಿಕ್ಷಕ ವರ್ಗ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಯಾಧ್ಯಕ್ಷರಾಗಿ ಚೆಪ್ಪುಡೀರ ರಾಮಕೃಷ್ಣ, ಉಪಾಧ್ಯಕ್ಷರಾಗಿ ಶಿವಕುಮಾರ್, ಖಜಾಂಜಿಯಾಗಿ ಫಿಲೋಮಿನಾ, ಪ್ರಮುಖರುಗಳಾಗಿ ಮನು ನಂಜಪ್ಪ, ಮಹೇಶ್, ಕೃಷ್ಣ, ಮಂಜುಳ ಗಣೇಶ್, ಅನೂಪ್, ಮುಖ್ಯಶಿಕ್ಷಕಿ ಹೆಚ್. ಎಂ. ಪಾರ್ವತಿ, ಶಿಕ್ಷಕ ವರ್ಗ, ತೊಡಗಿಕೊಂಡಿದ್ದಾರೆ.

ಸುಮಾರು 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿರುವ ಈ ಶಾಲೆಯಲ್ಲಿ ಪ್ರಸ್ತುತÀ 250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹೆಚ್ಚು ವಿದ್ಯಾರ್ಥಿಗಳು ಇದ್ದ ಕಾರಣದಿಂದಾಗಿ ಮಾದರಿ ಪ್ರಾಥಮಿಕ ಶಾಲೆ ಹೆಸರಿನಲ್ಲಿ ಮುಂದುವರಿಯುತ್ತಿದೆ. 9 ಶಿಕ್ಷಕರು ಶಿಕ್ಷಣ ನೀಡುತ್ತಿದ್ದಾರೆ.

ಸುಮಾರು 3 ಲಕ್ಷ ಹಣದಲ್ಲಿ ಆಚರಣೆ ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ ತಿಳಿಸಿದ್ದಾರೆ.

- ಸುದ್ದಿಪುತ್ರ