ಕುಶಾಲನಗರ, ಜ. 3 : ತಾಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಬಸವನಹಳ್ಳಿ ಬಳಿ ರೂ. 5 ಕೋಟಿ ವೆಚ್ಚದಲ್ಲಿ ವಿಶೇಷ ತರಬೇತಿ ಕೇಂದ್ರ ನಿರ್ಮಾಣ ಮಾಡಲು ಉದ್ದೇಶ ಹೊಂದಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಎನ್.ರಾಜಾರಾವ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ್ದು ಸಂಘ ಒಟ್ಟು 3600 ಸದಸ್ಯರನ್ನು ಹೊಂದಿದ್ದು ಸದಸ್ಯರ ಏಳಿಗೆಗಾಗಿ ನೂತನ ಕೇಂದ್ರದಲ್ಲಿ ವಿದ್ಯುತ್ ಕೈಮಗ್ಗ, ಸಿದ್ದ ಉಡುಪು, ಹೊಲಿಗೆ ತರಬೇತಿ ಮತ್ತಿತರ ಸೌಲಭ್ಯ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ.
ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷರಾಗಿ 3 ವರ್ಷಗಳು ಸಂದಿದ್ದು, ಸಂಘದ ಕಟ್ಟಡದ ಅಭಿವೃದ್ಧಿಗಾಗಿ ರೂ. 5 ಲಕ್ಷ ವೆಚ್ಚ ಮಾಡಲಾಗಿದೆ. ಕಟ್ಟಡದ ಮೇಲ್ಚಾವಣಿ ನಿರ್ಮಾಣ ಮಾಡಲಾಗಿದೆ. ಸಂಘದ ಕಚೇರಿ ಆವರಣದಲ್ಲಿ ಸಂಬಾರ ಪದಾರ್ಥಗಳ ಮಳಿಗೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಸುಮಾರು ರೂ. 25 ಲಕ್ಷ ವೆಚ್ಚದಲ್ಲಿ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿಡಲು ಗೋದಾಮು ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.
ಜೇನು ಕುರುಬ, ಸೋಲಿಗ, ಎರವ, ಮರಾಠಿ ನಾಯ್ಕ ಸಮುದಾಯಕ್ಕೆ ಪ್ರತ್ಯೇಕ ಉನ್ನತ ಶಿಕ್ಷಣ ಕೇಂದ್ರ ತೆರೆಯಲು ನಿರ್ಧರಿಸಲಾಗಿದ್ದು ಬ್ಯಾಡಗೊಟ್ಟದಲ್ಲಿ 100 ಎಕರೆ ಜಾಗ ಮೀಸಲಿರಿಸಲಾಗಿದೆ. ಮೊರಾರ್ಜಿ ಶಾಲೆ ಬದಲಾಗಿ ಈ ಸಮುದಾಯದ ವಿದ್ಯಾರ್ಥಿಗಳಿಗೆ ಶೇ.100 ರಷ್ಟು ಶಿಕ್ಷಣ ಕೇಂದ್ರದಲ್ಲಿ ಅವಕಾಶ ಕಲ್ಪಿಸಲು ಉದ್ದೇಶ ಹೊಂದಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಗಿರಿಜನರ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿದಲ್ಲಿ ಸರಕಾರದ ಯೋಜನೆಗಳು ಯಶಸ್ಸು ಗಳಿಸಲು ಸಾಧ್ಯ ಎಂದು ತಿಳಿಸಿರುವ ರಾಜಾರಾವ್, ತನ್ನ ಅಧಿಕಾರಾವಧಿಯಲ್ಲಿ ಸಂಘಕ್ಕೆ ಸಧ್ಯದಲ್ಲಿಯೇ 1 ಸಾವಿರಕ್ಕೂ ಅಧಿಕ ನೂತನ ಸದಸ್ಯರುಗಳನ್ನು ಸೇರ್ಪಡೆಗೊಳಿಸಲು ಚಿಂತನೆ ಹರಿಸಲಾಗಿದೆ ಎಂದಿದ್ದಾರೆ. ಗಿರಿಜನರು ತರುವ ಅರಣ್ಯ ಉತ್ಪನ್ನಗಳಿಗೆ ಅತ್ಯಧಿಕ ದರ ನೀಡಲು ಸಂಘ ಕ್ರಮಕೈಗೊಂಡಿದೆ. ಬಡ ಕುಟುಂಬಗಳಿಗೆ ಶವಸಂಸ್ಕಾರ ಮಾಡಲು ಹಣ ಸಹಾಯ, ಯುವಕ ಯುವತಿಯರಿಗೆ ಸಾಮೂಹಿಕ ವಿವಾಹ ನಡೆಸಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.