ವೀರಾಜಪೇಟೆ, ಜ. 3: ರಾಜ್ಯ ಸರ್ಕಾರ ಮಾರ್ಚ್ 31 ರವರೆಗೆ ಭತ್ತದ ಹುಲ್ಲನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡಬಾರದು ಎಂಬ ಆದೇಶವನ್ನು ಹಿಂಪಡೆಯಬೇಕು ಎಂದು ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಾಡಿಚಂಡ ಗಣಪತಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಮಾರ್ಚ್ನಿಂದ ಸಾಧಾರಣ ಮಳೆಯಾಗುತ್ತದೆ. ಗದ್ದೆಗಳಲ್ಲಿರುವ ಹುಲ್ಲು ಕೊಳೆಯುವ ಸ್ಥಿತಿಗೆ ತಲಪುತ್ತದೆ. ಇದರಿಂದ ರೈತರಿಗೆ ಯಾವದೇ ಪ್ರಯೋಜನವಾಗುವದಿಲ್ಲ. ಆದ್ದರಿಂದ ಭತ್ತ ಹಾಗೂ ಹುಲ್ಲನ್ನು ಸರ್ಕಾರವೇ ಬೆಂಬಲ ಬೆಲೆ ನೀಡಿ ಖರೀದಿಸಲಿ ಎಂದರು.
ಇತ್ತೀಚೆಗೆ ತಿತಿಮತಿಯಲ್ಲಿ ಅರಣ್ಯ ಇಲಾಖೆಯಿಂದ ನಡೆದ ರೈತ ಸಮಾವೇಶದಲ್ಲಿ ಸ್ವಂತ ಉಪಯೋಗಕ್ಕಾಗಿ ಮತ್ತು ಬಿದ್ದ ಮರಗಳನ್ನು ತೆಗೆಯಬಹುದು ಎಂದು ಸಿಸಿಎಫ್ ಹೇಳಿಕೆ ನೀಡಿದ್ದರು. ಮರ ತೆಗೆಯಲು ಪರವಾನಗಿಗೆ ತೆರಳಿದರೆ ಇಲ್ಲ ಸಲ್ಲದ ಕಾನೂನುಗಳನ್ನು ಹೇಳಿ ರೈತರನ್ನು ಸತಾಯಿಸುತ್ತಿದ್ದಾರೆ; ಇವರ ವಿರುದ್ಧ ಪ್ರತಿಭಟನೆ ಅನಿವಾರ್ಯ ಎಂದು ಹೇಳಿದರು.
ರ್ಯೆತ ಸಂಘದ ಸಂಚಾಲಕ ಕೆ.ಎಂ. ಕುಶಾಲಪ್ಪ ಮಾತನಾಡಿ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆಯಲ್ಲಿ ಲೋಕೋಪಯೋಗಿ ಇಲಾಖೆ ಸಂಪೂರ್ಣ ವಿಫಲವಾಗಿದ್ದು ರಸ್ತೆಯಲ್ಲಿ ಗುಂಡಿ ಇದೆಯೋ ಗುಂಡಿಯಲ್ಲಿ ರಸ್ತೆ ಇದೆಯೋ ಎಂಬ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.
ಗೋಷ್ಠಿಯಲ್ಲಿ ಕೊಕ್ಕಂಡ ಕಾವೇರಪ್ಪ, ಪುಲಿಯಂಡ ಪೊನ್ನಪ್ಪ, ಮಾಚಿಮಂಡ ಸುರೇಶ್ಅಯ್ಯಪ್ಪ ಉಪಸ್ಥಿತರಿದ್ದರು.