ಮಡಿಕೇರಿ, ಜ. 3: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ ಹಾಗೂ ಮೂರು ತಾಲೂಕುಗಳ ಯುವ ಒಕ್ಕೂಟಗಳ ಆಶ್ರಯದಲ್ಲಿ ತಾ. 20 ರಂದು ಜಿಲ್ಲಾ ಯುವಜನ ಮೇಳ ನಡೆಯಲಿದ್ದು, ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರು ಹೆಸರು ನೋಂದಾಯಿಸಿಕೊಳ್ಳುವಂತೆ ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ. ಸುಕುಮಾರ್ ತಿಳಿಸಿದ್ದಾರೆ.

ಗಾಳಿಬೀಡುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುವಜನ ಮೇಳವನ್ನು ಆಯೋಜಿಸಲಾಗಿದ್ದು, ಸ್ಪರ್ಧಾ ಕಾರ್ಯಕ್ರಮದಲ್ಲಿ ವೈಯುಕ್ತಿಕವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ತುಮಕೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಬಹುದಾಗಿದೆ.

ಸ್ಪರ್ಧಾ ಕಾರ್ಯಕ್ರಮದಲ್ಲಿ ಯುವಕ ಯುವತಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಭಾವಗೀತೆ, ಗೀಗಿಪದ, ಲಾವಣಿ, ಕೋಲಾಟ, ರಂಗಗೀತೆ, ಜಾನಪದ ನೃತ್ಯ, ಜಾನಪದ ಗೀತೆ, ರಾಗಿ ಜೋಳ ಬೀಸುವ ಒನಕೆ ಪದ, ಸೋಬಾನೆ, ಭಜನೆ, ಏಕಪಾತ್ರಭಿನಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಪ್ರಯಾಣ ಭತ್ಯೆ ನೀಡಲಾಗುವದು. ಸ್ಪರ್ಧಿಗಳು ತಾ. 20 ರಂದು ಬೆಳಿಗ್ಗೆ 10 ಗಂಟೆಯೊಳಗೆ ಸ್ಥಳದಲ್ಲಿ ಹಾಜರಿರಬೇಕು. ಹೆಚ್ಚಿನ ಮಾಹಿತಿಗೆ 9481213920, 9449759029 ನ್ನು ಸಂಪರ್ಕಿಸಬಹುದು.