ಮಡಿಕೇರಿ, ಜ. 3: ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಯನ್ನು ಕುಟುಂಬ ಕಲ್ಯಾಣ ಇಲಾಖೆಯ “ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್” ಎಂಬ ಸ್ವಾಯತ್ತ ಸಂಸ್ಥೆಯ ಮೂಲಕ ಅನುಷ್ಠಾನಗೊಳಿಸುತ್ತಿದೆ. ರಾಜ್ಯದಲ್ಲಿ ವಾಸಿಸುತ್ತಿರುವ ಎಲ್ಲ್ಲಾ ಜನರಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸಲು “ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ’ ಯೋಜನೆಯನ್ನು ಸರ್ಕಾರವು ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ ಪ್ರಾಥಮಿಕ, ನಿರ್ದಿಷ್ಟ ದ್ವಿತೀಯ ಕ್ಲಿಷ್ಟಕರ, ತೃತೀಯ ಮತ್ತು ತುರ್ತು ಹಂತದ ಚಿಕಿತ್ಸೆಯನ್ನು ರಾಜ್ಯದ ಎಲ್ಲಾ ವರ್ಗದ ಜನತೆಗೆ ಭರವಸೆ ಮಾದರಿಯಲ್ಲಿ ಒದಗಿಸುವ ಯೋಜನೆಯಾಗಿದೆ. ಈ ಯೋಜನೆಯನ್ನು ಕಳೆದ ಅಕ್ಟೋಬರ್ 30 ರಿಂದ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ.

ಆಯುಷ್ಮಾನ್ ಭಾರತ್: ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯ ಪಡೆಯಲು ರೋಗಿಗಳನ್ನು ಅರ್ಹತಾ ರೋಗಿಗಳು ಮತ್ತು ಸಾಮಾನ್ಯ ರೋಗಿಗಳು ಎಂದು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಹಾಗೂ “2013 ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ” ಪ್ರಕಾರ ಅರ್ಹತಾ ಕುಟುಂಬಕ್ಕೆ ಸೇರಿರುವ ರೋಗಿಗಳು (ಬಿ.ಪಿ.ಎಲ್ ಮತ್ತು ಅಂತ್ಯೋದಯ), ಮತ್ತು ಅರ್ಹತಾ ಕಾರ್ಡ್ ಹಾಗೂ ಆದ್ಯತೇತರ ಕಾರ್ಡ್ (ಎ.ಪಿ.ಎಲ್) ಹೊಂದಿರುವ ರೋಗಿಗಳು ಇದರ ಫಲಾನುಭವಿಗಳಾಗಿದ್ದಾರೆ.

ಅರ್ಹತಾ ರೋಗಿಗಳಿಗೆ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಮತ್ತು ರೆಫರಲ್ ಮೂಲಕ ನೋಂದಾಯಿತ ಖಾಸಗಿ ನೆಟ್‍ವರ್ಕ್ ಆಸ್ಪತ್ರೆಯಲ್ಲಿ ರೂ. 5 ಲಕ್ಷದವರೆಗೆ 1614 ಚಿಕಿತ್ಸಾ ವಿಧಾನಗಳಿಗೆ ನಗದು ರಹಿತ ಚಿಕಿತ್ಸೆ ನೀಡಲಾಗುತ್ತದೆ. ಸಾಮಾನ್ಯ ರೋಗಿಗಳಿಗೆ ಸಹ-ಪಾವತಿ ಆಧಾರದ ಮೇಲೆ ರೂ. 1.50 ಲಕ್ಷದವೆರೆಗೆ 1614 ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಒದಗಿಸಲಾಗುತ್ತದೆ. ಇದರಲ್ಲಿ ಶೇ.30 ಸರ್ಕಾರಿ ಅನುದಾನ ಶೇ.70 ರೋಗಿಯೇ ಭರಿಸಬೇಕಾಗುತ್ತದೆ.

ತಾಯಿ ಮತ್ತು ಮಕ್ಕಳ ಆರೋಗ್ಯ ಹಾಗೂ ಜ್ವರ, ಕೆಮ್ಮು ವಾಂತಿ-ಭೇದಿ ಮುಂತಾದ ಎಲ್ಲ ರೀತಿಯ ಪ್ರಾಥಮಿಕ ಹಂತದ ಆರೋಗ್ಯ ಸೇವೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದಲೇ ನೀಡಲಾಗುವದು. ಹೆರಿಗೆ ಸೇವೆ, ಡೆಂಗ್ಯೂ, ಮಲೇರಿಯಾ ಮೂಳೆ ಮುರಿತ, ಸಾಮಾನ್ಯ ಶಸ್ತ್ರ ಚಿಕಿತ್ಸೆಗಳು ಮುಂತಾದ ನಿಗದಿತ 291 ದ್ವಿತೀಯ ಹಂತದ ಚಿಕಿತ್ಸೆಗಳನ್ನು ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ನೀಡಲಾಗುವದು. 254 ಸಂಕೀರ್ಣ ದ್ವಿತೀಯ ಹಂತದ ಕಾಯಿಲೆಗಳಿಗೆ ಚಿಕಿತ್ಸೆ ಸಾಧ್ಯವಿಲ್ಲದ ಪಕ್ಷದಲ್ಲಿ ರೋಗಿಗಳನ್ನು ಚಿಕಿತ್ಸೆಗಾಗಿ ನೋಂದಾಯಿತ ಆಸ್ಪತ್ರೆಗಳಿಗೆ ಸ್ಥಳಾಂತ ಮಾಡಲಾಗುವದು. ಹೃದಯ ರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ ಮುಂತಾದ ನಿಗದಿತ 900 ತೃತೀಯ ಹಂತದ ಆರೋಗ್ಯ ಸೇವೆಗಳಿಗೆ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಚಿಕಿತ್ಸೆ ಸೌಲಭ್ಯ ಇಲ್ಲದ ಪಕ್ಷದಲ್ಲಿ ರೋಗಿಗಳನ್ನು ಈ ಯೋಜನೆಯಡಿಯಲ್ಲಿ ಸೌಲಭ್ಯವಿರುವ ನೋಂದಾಯಿತವಾಗಿರುವ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗುವದು. 169 ತುರ್ತು ಸಂದರ್ಭದ ಚಿಕಿತ್ಸೆಗಳಿಗೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು. ಒಮ್ಮೆ ಸ್ಥಳಾಂತ ಆದ ನಂತರ ರೋಗಿಗಳು ಚಿಕಿತ್ಸೆಗಾಗಿ ತಮಗೆ ಬೇಕಾದ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಕೊಡಗು ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್: ಆರೋಗ್ಯ ಕರ್ನಾಟಕ, ಈ ಯೋಜನೆಯನ್ನು ಜಿಲ್ಲಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ, ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಸೇವೆಯನ್ನು ಅಕ್ಟೋಬರ್ 31 ರಿಂದ ನೀಡಲಾಗುತ್ತಿದೆ. ಈ ಕಾರ್ಯಕ್ರಮದ ಫಲಾನುಭವಿಗಳಿಗೆ ಕಾರ್ಡ್‍ನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು ಈಗಾಗಲೇ ಬೇಕಾಗಿರುವ ಗಣಕಯಂತ್ರ, ಪ್ರಿಂಟರ್‍ಗಳು ಲಭ್ಯವಿದ್ದು, ಪ್ರತ್ಯೇಕ ನೋಂದಾವಣಿ ಕೇಂದ್ರಗಳನ್ನು ಕೂಡ ತೆರೆಯಲಾಗಿದ್ದು, ಕೇಂದ್ರಗಳಿಗೆ ಅಂತರ್ಜಾಲ ಸಂಪರ್ಕದ ವ್ಯವಸ್ಥೆ ಮಾಡಲಾಗಿದೆ. ಫಲಾನುಭವಿಯ ಗುರುತು ಪತ್ತೆ ಮಾಡಲು ಬಯೋಮೆಟ್ರಿಕ್ ರೀಡರ್‍ನ ಅವಶ್ಯಕತೆ ಇದ್ದು ಇದನ್ನು ಸರಬರಾಜು ಮಾಡಲು ಕಿಯೋನಿಕ್ಸ್ ಸಂಸ್ಥೆಗೆ ಈಗಾಗಲೇ ವಹಿಸಲಾಗಿದೆ. ಈ ಯಂತ್ರ ಸರಬರಾಜು ಆದ ತಕ್ಷಣ ಕಾರ್ಡ್ ವಿತರಿಸುವ ಕಾರ್ಯವನ್ನು ಪ್ರಾರಂಭಿಸಲಾಗುವದು. ಈ ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳಲ್ಲಿ ಕಾರ್ಡ್ ಇಲ್ಲವೆಂದು ಯಾವದೇ ಫಲಾನುಭವಿಗೆ ಚಿಕಿತ್ಸೆ ನೀಡಲು ನಿರಾಕರಿಸದೇ, ಫಲಾನುಭವಿಯ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‍ನ್ನು ಹಾಜರುಪಡಿಸಿ ಚಿಕಿತ್ಸೆಯನ್ನು ನೀಡಲು ನೋಂದಾಯಿತ ಆಸ್ಪತ್ರೆಗಳಿಗೆ ರಾಜ್ಯ ನಿರ್ದೇಶನಾಲಯದಿಂದ ಆಯುಕ್ತರು ನಿರ್ದೇಶನ ನೀಡಿದ್ದಾರೆ. ಅದರಂತೆ ಈವರೆಗೆ ಈ ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲಾ ನೋಂದಾಯಿತ ಅಸ್ಪತ್ರೆಗಳಲ್ಲಿ ಯಾವದೇ ರೋಗಿಗೆ ತೊಂದರೆಯಾಗದ ರೀತಿಯಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಕೊಡಗು ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್: ಆರೋಗ್ಯ ಕರ್ನಾಟಕ ಯೋಜನೆಯಲ್ಲ್ಲಿ, ಜಿಲ್ಲಾ ಆಸ್ಪತ್ರೆಯಲ್ಲಿ ಇದುವರೆಗೆ ದ್ವಿತೀಯ ಹಂತದ, ಕ್ಲಿಷ್ಟಕರ ದ್ವಿತೀಯ ಹಾಗೂ ತುರ್ತು ಚಿಕಿತ್ಸೆ ಒಟ್ಟು 456, ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 588, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಟ್ಟು 372 ಮಂದಿಗೆ ಚಿಕಿತ್ಸೆ ನೀಡಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಯ ನೆಟ್‍ವರ್ಕ್ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಒಟ್ಟು 1056 ಮಂದಿಯನ್ನು ಈ ಯೋಜನೆಯಡಿಯಲ್ಲಿ ಕಳುಹಿಸಿಕೊಡಲಾಗಿದೆ. ಅದಕ್ಕಾಗಿಯೇ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆಯು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮತ್ತು ವೈದ್ಯಕೀಯ ಅಧೀಕ್ಷಕರು, ಜಿಲ್ಲಾ ಶಸ್ತ್ರಚಿಕಿತ್ಸಕರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.