ಮಡಿಕೇರಿ, ಜ. 1: ಕಳೆದ 5 ತಿಂಗಳುಗಳಿಂದ ಮಡಿಕೇರಿ ನಗರದ ರಸ್ತೆ ಬದಿಗಳಲ್ಲಿ ಅಲೆದಾಡುತ್ತಿದ್ದ ಅನಾಥ ಮಾನಸಿಕ ಅಸ್ವಸ್ಥನನ್ನು ಕಂಡ ಸಾರ್ವಜನಿಕರು ಗ್ರಾಮಂತರ ಪೊಲೀಸ್ ಠಾಣೆಯ ಸಿಬ್ಬಂದಿ ನಿತ್ಯ ಅವರ ಮಾಹಿತಿ ಮೇರೆಗೆ ವಿಕಾಸ್ ಜನಸೇವಾ ಟ್ರಸ್ಟಿನ ಜೀವನದಾರಿ ಆಶ್ರಮದ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ಕವಿತಾ ಭೀಮಯ್ಯ ಹಾಗೂ ಸ್ವಸ್ಥ ಸಂಸ್ಥೆಯ ಸಿ.ಬಿ.ಆರ್. ಸಂಯೋಜಕ ಮುರುಗೇಶ್ ಅವರು ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ಸಹಾಯದೊಂದಿಗೆ ಸಮಾಜ ಸೇವಕ ಸಂದೀಪ್ ಅವರ ಸಹಾಯದಿಂದ ಆ ಮಾನಸಿಕ ವ್ಯಕ್ತಿಯನ್ನು ಕ್ಷೌರ ಮಾಡಿಸಿ, ಸ್ನಾನ ಮಾಡಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಮಾನಸಿಕ ತಜ್ಞ ಡಾ. ಸತೀಶ್ ಆರೋಗ್ಯ ಅಧಿಕಾರಿಯ ನಿರ್ದೇಶನದ ಮೇರೆಗೆ ಆಸ್ಪತ್ರೆಗೆ ಬಂದು ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ತೆರಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಅವರು ಫೋನ್‍ಕರೆ ಮೂಲಕ ಮಾತನಾಡಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮೂಲಕ ಆತನಿಗೆ ಪುನರ್ವಸತಿ ಕಲ್ಪಿಸುವದಾಗಿ ತಿಳಿಸಿದರು. ಮಾನಸಿಕ ಅಸ್ವಸ್ಥನನ್ನು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿಗಳಾದ ಡಾ. ಡೆವಿನ್, ಶಿವಕುಮಾರ್, ರಾಜಶೇಖರ್ ಹಾಗೂ ಮಾನಸಧಾರದ ವಿಶ್ವನಾಥ್ ಮೈಸೂರಿನ ಮಾನಸಧಾಮಕ್ಕೆ ಸೇರಿಸಿದರು.