ಮಡಿಕೇರಿ, ಜ.1 : ನ್ಯಾಯಾಂಗ ಇಲಾಖೆಯ ನಿವೃತ್ತ ನೌಕರರೊಬ್ಬರು ಸರಕಾರಿ ಜಾಗ ಹಾಗೂ ಕಟ್ಟಡವನ್ನು ಅತಿಕ್ರಮಿಸಿಕೊಂಡು ನೂತನ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿ ತಪ್ಪಿತಸ್ಥ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಹಾಗೂ ಖಜಾಂಚಿ ಹೆಚ್.ಕೆ.ಪ್ರೇಮಾ ಅವರುಗಳು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಎಚ್ಚರಿಕೆ ನೀಡಿದರು.

ಕರ್ಣಗೇರಿ ಗ್ರಾಮದ ಸರ್ವೆ ನಂಬರ್ 542/1ರಿಂದ ವಿಂಗಡಿಸಿದ ಸ.ನಂ.542/5ರ ಎರಡು ಸೆಂಟ್ ಜಾಗವನ್ನು 1989ರಲ್ಲಿ ನ್ಯಾಯಾಂಗ ಇಲಾಖೆಯ ನೌಕರರೊಬ್ಬರಿಗೆ ಅಂದಿನ ಉಪ ವಿಭಾಗಾಧಿಕಾರಿಗಳು ಮಂಜೂರು ಮಾಡಿ ಹಕ್ಕುಪತ್ರ ನೀಡಿದ್ದಾರೆ. ಈ ಜಾಗವನ್ನು ದುರಸ್ತಿಪಡಿಸಿದ ಬಳಿಕ ಸರ್ವೆ ನಂ.542/5ರ ಬದಲು ಸ.ನಂ.542/3 ಎಂದಾಗಿದ್ದು, ಈ ಜಾಗ ಲೋಕೋಪಯೋಗಿ ಇಲಾಖೆಯ ವಸತಿಗೃಹಗಳ ಹತ್ತಿರದಲ್ಲಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ವಸತಿಗೃಹವನ್ನು ಅತಿಕ್ರಮಣ ಮಾಡಿಕೊಂಡಿದ್ದು, 2007ರಂದು ಅಶೋಕಪುರದ ನಿವಾಸಿಗಳು ಇದರ ವಿರುದ್ಧ ರಸ್ತೆ ತಡೆ ನಡೆಸಿ ಪ್ರತಿಭಟಿಸುವ ಮೂಲಕ ಸರಕಾರಿ ಕಟ್ಟಡದ ಅತಿಕ್ರಮಣವನ್ನು ತೆರವುಗೊಳಿಸುವಂತೆ ಒತ್ತಾಯಿಸಲಾಗಿತ್ತು. ಈ ಸಂದರ್ಭ ಉಪವಿಭಾಗಾಧಿಕಾರಿಗಳು, ಹಾಗೂ ತಹಶೀಲ್ದಾರರು ಬಂದು ಸರ್ವೆ ನಡೆಸಿದಾಗ ಸುಮಾರು ಎಂಟು ಮುಕ್ಕಾಲು ಸೆಂಟ್ ಜಾಗವನ್ನು ಅತಿಕ್ರಮಿಸಿಕೊಂಡಿರುವದು ಸಾಬೀತಾಗಿದೆ ಎಂದು ಪ್ರೇಮಾ ಹಾಗೂ ದಿವಾಕರ್ ವಿವರಿಸಿದರು.

2009ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಅತಿಕ್ರಮಿತ ಜಾಗವನ್ನು ತೆರವುಗೊಳಿಸಲು ತಹಶೀಲ್ದಾರರಿಗೆ ನಿರ್ದೇಶನ ನೀಡಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ಯಾವದೇ ಅಧಿಕಾರಿಗಳು ಈ ಬಗ್ಗೆ ಯಾವದೇ ಕ್ರಮಕೈಗೊಂಡಿಲ್ಲ ಎಂದು ಅವರುಗಳು ಆರೋಪಿಸಿದರು.

ಇದೀಗ ನಿವೃತ್ತಿ ಹೊಂದಿರುವ ನೌಕರ, ಅತಿಕ್ರಮಿಸಿಕೊಂಡಿರುವ ಸರಕಾರಿ ಕಟ್ಟಡದ ಹೆಂಚು, ಮರಮುಟ್ಟುಗಳನ್ನು ತೆಗೆದು ಕಟ್ಟಡದ ಅರ್ಧ ಭಾಗವನ್ನು ಕೆಡವಿ ಹಾಕಿದ್ದಾರೆ. ಆ ಜಾಗದಲ್ಲಿ ಪಿಲ್ಲರ್ ಹಾಕಿ ಕಾಂಕ್ರಿಟ್ ಕಟ್ಟಡ ನಿರ್ಮಿಸಲು ಆರಂಭಿಸಿದ್ದಾರೆ. ಈ ಬಗ್ಗೆ ಡಿ14ರಂದು ಜಿಲ್ಲಾಧಿಕಾರಿಗಳು, ಡಿ.18ರಂದು ನಗರಾಭಿವೃದ್ಧಿ ಆಯುಕ್ತರು, 19ರಂದು ಪೌರಾಯುಕ್ತರಿಗೆ ದೂರು ಸಲ್ಲಿಸಿ ಕಾಮಗಾರಿ ತÀಡೆ ಹಿಡಿಯುವಂತೆ ಕೋರಲಾಗಿತ್ತು. ಅಲ್ಲದೆ ಡಿ.31ರಂದು ತಹಶೀಲ್ದಾರರಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು. ತಕ್ಷಣ ಒತ್ತುವರಿ ತೆರವುಗೊಳಿಸುವ ಮೂಲಕ ಸರಕಾರಿ ಜಾಗವನ್ನು ಸಂರಕ್ಷಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ಬಾಡಿಗೆಗೆ ಇದ್ದ ನೌಕರ 2009ರ ಬಳಿಕ ಬಾಡಿಗೆಯನ್ನೂ ನೀಡದೆ, ನಿವೃತ್ತರಾದರೂ ವಸತಿಗೃಹವನ್ನು ತೆರವುಗೊಳಿಸದೆ ಇದೀಗ ಅದೇ ಕಟ್ಟಡವನ್ನು ಅತಿಕ್ರಮಿಸಿಕೊಂಡು ಕಟ್ಟಡ ನಿರ್ಮಿಸಲು ಮುಂದಾಗಿರುವದು ಅಪರಾಧವಾಗಿದೆ. ತಕ್ಷಣ ತಪ್ಪಿತಸ್ಥ ವ್ಯಕ್ತಿಯನ್ನು ಬಂಧಿಸಬೇಕೆಂದು ದಿವಾಕರ್ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ತಾಲೂಕು ಸಂಚಾಲಕ ದೀಪಕ್, ವೇಣುಕಿಶೋರ್ ಹಾಗೂ ಜಯಪ್ರಕಾಶ್ ಉಪಸ್ಥಿತರಿದ್ದರು.