ಮಡಿಕೇರಿ, ಜ. 1: ಕೊಡಗು ಜಿಲ್ಲಾ ನೇಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ಡಾ. ಎ.ಆರ್. ರಾಜಾರಾಮ ಮತ್ತು ಕಾರ್ಯದರ್ಶಿಯಾಗಿ ಡಾ. ಪಿ. ಎನ್. ಕುಲಕರ್ಣಿ ಮುಂದಿನ ಎರಡು ವರುಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾದರು. ಕುಶಾಲನಗರದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಇತರ ಪದಾಧಿಕಾರಿಗಳಾಗಿ ಡಾ. ರಾಜಾರಾಮ ಶೆಟ್ಟಿ ಸಹ ಕಾರ್ಯದರ್ಶಿ, ಡಾ. ಪದ್ಮನಾಭ ಖಜಾಂಚಿ ಮತ್ತು ಡಾ. ಈಶ್ವರಿ (ಮಹಿಳಾ ಪ್ರತಿನಿಧಿ)ಗಳಾಗಿ ಆಯ್ಕೆಯಾದರು. ಜಿಲ್ಲೆಯ ಮೂರು ತಾಲೂಕುಗಳ ಪ್ರತಿನಿಧಿಗಳಾಗಿ ಡಾ. ಹೀನಾ, ಡಾ. ಸೌಮ್ಯ ಮತ್ತು ಡಾ. ಪುರುಷೋತ್ತಮ; ನಿರಂತರ ವೈದ್ಯ ಶಿಕ್ಷಣದ ಸಂಚಾಲಕರಾಗಿ ಡಾ. ಶಾಮಪ್ರಸಾದ ಮತ್ತು ಡಾ. ಉದಯಕುಮಾರ ಹಾಗೂ ವಕ್ತಾರರಾಗಿ ಡಾ. ಉದಯಶಂಕರ ನೇಮಕಗೊಂಡರು.

ಬಳಿಕ ನಿರಂತರ ವೈದ್ಯ ಶಿಕ್ಷಣ ಕಾರ್ಯಕ್ರಮ ನಡೆಯಿತು. ಹೈದರಾಬಾದಿನಿಂದ ಆಗಮಿಸಿದ್ದ ಇಮಾಮಿ ಔಷಧ ನಿರ್ಮಾಣ ಸಂಸ್ಥೆಯ ಸಲಹೆಗಾರ ಡಾ. ಸದಾನಂದ ಪತ್ರಿ ಹಾಗೂ ಚಿತ್ರದುರ್ಗದ ಇಷ್ಟ ಆಯುರ್ವೇದ ಪ್ರತಿಷ್ಠಾನದ ನಿರ್ದೇಶಕ ಡಾ. ಯೋಗಾ ನರಸಿಂಹಯ್ಯ ಉಪನ್ಯಾಸ ನೀಡಿದರು.

ಜ್ವರ ಚಿಕಿತ್ಸೆಯಲ್ಲಿ ರಸೌಷಧಗಳ ಮಹತ್ವದ ಕುರಿತು ಮಾತನಾಡುತ್ತಾ ಡಾ. ಯೋಗಾ ನರಸಿಂಹಯ್ಯನವರು ವೈದ್ಯರು ರೋಗದ ಕಾರಣಗಳನ್ನು ಗುರುತಿಸಿ ಅವುಗಳನ್ನು ದೂರಮಾಡಬೇಕು. ರಸೌಷಧಗಳ ಸೇವನೆಯ ರೋಗಿಗಳು ಕಡ್ಡಾಯವಾಗಿ ಪ್ರಾಣಾಯಾಮ ಮಾಡಬೇಕು. ಇದರಿಂದ ಚಿಕಿತ್ಸೆಯಲ್ಲಿ ಬಳಸುವ ಖನಿಜ-ಲವಣಗಳು ಶರೀರದಿಂದ ಸರಿಯಾಗಿ ವಿಸರ್ಜನೆಗೊಳ್ಳುತ್ತವೆ ಎಂದರು. ಡಾ. ಸೌಮ್ಯ ಉಪನ್ಯಾಸಕರನ್ನು ಪರಿಚಯಿಸಿದರು. ಡಾ. ಶಾಮಪ್ರಸಾದ ವಂದಿಸಿದರು.

ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದ ಇಮಾಮಿ ಸಂಸ್ಥೆಯ ಪ್ರತಿನಿಧಿ ಸುನಿಲ್ ಭಟ್ ಉಪಸ್ಥಿತರಿದ್ದರು.