ಮಡಿಕೇರಿ, ಜ. 2: ಮಡಿಕೇರಿಯಲ್ಲಿ ತಾ. 11ರಿಂದ 13ರವರೆಗೆ ಕೊಡಗು ಪ್ರವಾಸಿ ಉತ್ಸವ ನಡೆಯಲಿದ್ದು, ನಾಡಿನ ಹೆಸರಾಂತ ಕಲಾವಿದರುಗಳಾದ ಎಂ.ಡಿ. ಪಲ್ಲವಿ, ಶ್ರೀಹರ್ಷ ಹಾಗೂ ಸಂಗೀತ ನಿರ್ದೇಶಕ ಮತ್ತು ಗಾಯಕರುಗಳಾದ ಅರ್ಜುನ್ ಜನ್ಯಾ ಕಲಾರಸಿಕರನ್ನು ರಂಜಿಸಲಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರ ವಿಶೇಷ ಕಾಳಜಿ ಹಾಗೂ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಉಸ್ತುವಾರಿಯಲ್ಲಿ ಈ ಉತ್ಸವ ನಡೆಯಲಿದ್ದು, ಆಗಸ್ಟ್ ದುರಂತದ ಬಳಿಕ ಜಿಲ್ಲೆಯಲ್ಲಿ ಕುಂಠಿತಗೊಂಡಿರುವ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ನಗರದ ಗಾಂಧಿ ಮೈದಾನದಲ್ಲಿ ಹತ್ತಾರು ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ.ತ. 13ರಂದು ಬೆಳಿಗ್ಗೆ 8 ಗಂಟೆಯಿಂದ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಡೆಯಲಿದ್ದು, ಮುತ್ತಣ್ಣ ವೃತ್ತದಿಂದ ರಾಜಾಸೀಟ್ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಜನರು ಮುಕ್ತವಾಗಿ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವದು. ಈ ಫೆಟ್ಟಿವಲ್‍ಗೆ ಬೆಳಿಗ್ಗೆ 8 ಗಂಟೆಗೆ ಯೋಗ ಹಾಗೂ ಏರೋಬಿಕ್ಸ್ ಮೂಲಕ ಚಾಲನೆ ನೀಡಲಾಗುವದು. ಅಲ್ಲದೆ, ರಾಷ್ಟ್ರ, ರಾಜ್ಯ ಹಾಗೂ ಜಿಲ್ಲೆಯ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

ರಾಜಾಸೀಟು ರಸ್ತೆ ಹಾಗೂ ಗಾಂಧಿ ಮೈದಾನ ಪ್ರದೇಶದಲ್ಲಿ ಜಿಲ್ಲಾಡಳಿತ ವತಿಯಿಂದ ಅಂಗಡಿ ಮಳಿಗೆಗಳನ್ನು ತೆರೆಯಲಿದ್ದು, ಆಹಾರ, ತಿಂಡಿ ತಿನಿಸು ವಿವಿಧ ಕರಕುಶಲ ಹಾಗೂ ಇತರ ವಸ್ತುಗಳ ಮಾರಾಟ ಮಳಿಗೆಗಳು ಜನತೆಯನ್ನು ಆಕರ್ಷಿಸಲಿವೆ.

ತಾ. 12ರಂದು ಪಶುಸಂಗೋಪನಾ ಇಲಾಖೆ ವತಿಯಿಂದ ಶ್ವಾನ ಪ್ರದರ್ಶನ ನಡೆಯಲಿದ್ದು, ಮೂರೂ ದಿನಗಳ ಕಾಲ ತೋಟಗಾರಿಕಾ ಇಲಾಖೆ ವತಿಯಿಂದ ರಾಜಾಸೀಟಿನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ವರ್ಷಂಪ್ರತಿ ಏಪ್ರಿಲ್ ತಿಂಗಳಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನವನ್ನು ಪ್ರವಾಸಿ ಉತ್ಸವದ ಸಂದರ್ಭ ನಡೆಸಲು ಜಿಲ್ಲಾಧಿಕಾರಿ ಶ್ರೀವಿದ್ಯಾ ಈ ಹಿಂದೆ ಸೂಚನೆ ನೀಡಿದ್ದು ಉತ್ಸವಕ್ಕೆ ಇದು ಇನ್ನಷ್ಟು ಮೆರಗು ನೀಡಲಿದೆ.

ತಾ. 11ರಂದು ಸಂಜೆ 6 ಗಂಟೆಯಿಂದ 10ರ ತನಕ ಹೆಸರಾಂತ ಗಾಯಕಿ ಎಂ.ಡಿ. ಪಲ್ಲವಿ ತಂಡದ ಗಾನಸುಧೆ ಹರಿಯಲಿದ್ದು, ತಾ. 12ರಂದು ಗಾಯಕ ಶ್ರೀಹರ್ಷ ಹಾಗೂ ಬಳಗ ಕಲಾರಸಿಕರನ್ನು ರಂಜಿಸಲಿದೆ. ತಾ. 13ರಂದು ರಾಜ್ಯದ ಸುಪ್ರಸಿದ್ದ ಸಂಗೀತ ನಿರ್ದೇಶಕ ಹಾಗೂ ಗಾಯಕ ಮಡಿಕೇರಿಯಲ್ಲಿ ಕಲಾವಿದರ ಮನಸೂರೆಗೊಳ್ಳಲು ಆಗಮಿಸುತ್ತಿದ್ದಾರೆ. ಮೂರೂ ದಿನಗಳ ಸಾಂಸ್ಕøತಿಕ ಕಾರ್ಯಕ್ರಮಗಳ ಆರಂಭದಲ್ಲಿ ಕೊಡವ ಸಾಹಿತ್ಯ ಅಕಾಡೆÀಮಿ, ಅರೆಭಾಷೆ ಗೌಡ ಸಾಂಸ್ಕøತಿಕ ಅಕಾಡೆಮಿ ವತಿಯಿಂದ ಜಿಲ್ಲೆಯ ಸಂಸ್ಕøತಿ ಆಚಾರ - ವಿಚಾರಗಳನ್ನು ಪ್ರವಾಸಿಗರಿಗೆ ಪರಿಚಯಿಸಲು ತೀರ್ಮಾನಿಸಲಾಗಿದೆ. ತಾ. 12ರಂದು ಜಿಲ್ಲೆಯ ಕಲಾವಿದರಾಗಿ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ವೇಣುವಾದನದ ನಾದವನ್ನು ಪಸರಿಸಿರುವ ಅಂಬಳೆ ಹೇಮಂತ್ ಮತ್ತು ಅಂಬಳೆ ಹೇರಂಭ ಇವರುಗಳ ವೇಣುವಾದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಅಸೋಸಿಯೇಷನ್, ಹೋಂ ಸ್ಟೇ ಅಸೋಸಿಯೇಶನ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಕೂರ್ಗ್ ಟ್ರಾವಲ್ಸ್ ಅಸೋಸಿಯೇಶನ್ ಇವರುಗಳ ಸಹಕಾರವನ್ನು ಪಡೆಯಲಾಗಿದೆ.

ಕೊಡಗು ಪ್ರವಾಸಿ ಉತ್ಸವದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಲವಷ್ಟು ಸಭೆಗಳು ನಡೆದಿದ್ದು, ಇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪ್ರೀಯ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳನ್ನೊಳಗೊಂಡ ಸಭೆ ನಡೆಯಿತು. ಮೂರು ದಿನಗಳ ಕಾಲ ನಡೆಯುವ ಉತ್ಸವ ಸಂದರ್ಭ ವಾಹನ ಸಂಚಾರ, ವಾಹನ ನಿಲುಗಡೆ ಸುರಕ್ಷತಾ ಕ್ರಮಗಳು, ವ್ಯಾಪಕ ಪ್ರಚಾರ, ಸ್ವಚ್ಛತೆ, ಶೌಚಾಲಯ ಹಾಗೂ ಇತರ ವಿಚಾರಗಳ ಕುರಿತು ಸಲಹೆಗಳನ್ನು ಪಡೆದು ಸೂಚನೆ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಹೆಚ್.ಪಿ. ಜನಾರ್ದನ ಅವರು ಉತ್ಸವದ ಕುರಿತು ಹಮ್ಮಿಕೊಂಡ ಯೋಜನೆಗಳ ಬಗ್ಗೆ ವಿವರಿಸಿದರು.

ಅಪರ ಜಿಲ್ಲಾಧಿಕಾರಿ ಶ್ರೀನಿವಾಸ್ ಮಾತನಾಡಿ ವಿವಿಧ ಇಲಾಖೆಗಳ ವತಿಯಿಂದ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ತೆರೆಯುವಂತೆ ಸೂಚಿಸಿದರು. ಉಪವಿಭಾಗಾಧಿಕಾರಿ ಜವರೇಗೌಡ, ಜಿಲ್ಲೆಯ ವಿವಿಧ ಇಲಾಖಾಧಿಕಾರಿಗಳು, ಸಂಘ - ಸಂಸ್ಥೆಗಳ ಪದಾಧಿಕಾರಿಗಳು ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದರು.