ಶ್ರೀಮಂಗಲ, ಜ.1: ಹೊರಗಿನಿಂದ ಬಂದವರಿಗೆ ನಾಡಿನ ಮಣ್ಣು, ನೀರು, ಗಾಳಿ, ಆಹಾರ, ಆರ್ಥಿಕ ಸಂಪತ್ತು, ರಾಜಕೀಯ-ಸಾಮಾಜಿಕ ಸ್ಥಾನಮಾನ ಎಲ್ಲವೂ ಬೇಕು, ಆದರೆ ಕೊಡವ ಭಾಷೆ ಕಲಿಯಲು ಹಿಂದೇಟು ಹಾಕುವದು ಸರಿಯಲ್ಲ ಎಂದು ಸಾಯಿಶಂಕರ್ ವಿಧ್ಯಾಸಂಸ್ಥೆಯ ಅಧ್ಯಕ್ಷ ಕೋಳೇರ ಝರು ಗಣಪತಿ ಹೇಳಿದರು.

ಕೊಡವ ತಕ್ಕ್ ಎಳ್ತ್‍ಕಾರಡ ಕೂಟ ಹಾಗೂ ಪೊನ್ನಂಪೇಟೆ ಸಾಯಿಶಂಕರ್ ವಿಧ್ಯಾಸಂಸ್ಥೆಯ ಜಂಟಿ ಆಶ್ರಯದಲ್ಲಿ ನಡೆದ 157ನೇ ಹೆಜ್ಜೆಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿಧ್ಯಾರ್ಥಿ ಜೀವನದಲ್ಲೇ ತಮ್ಮ ಸಹಪಾಟಿಗಳಿಂದ ಕೊಡವ ಭಾಷೆಯನ್ನು ಕಲಿತುಕೊಳ್ಳಬೇಕು, ಕೊಡವ ಭಾಷಿಕ ವಿಧ್ಯಾರ್ಥಿಗಳು ಇತರರಿಗೆ ಕೊಡವ ಭಾಷೆಯನ್ನು ಕಲಿಸಿಕೊಡಬೇಕು ಎಂದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಪುಸ್ತಕದ ಪ್ರಾಯೋಜಕ ಚೊಟ್ಟೆಯಾಂಡಮಾಡ ಸುಜಿತ್ ಅಪ್ಪಣ್ಣ ಸಾಹಿತ್ಯ ಕೃಷಿ ಸುಲಭ ಸಾಧ್ಯವಾದು ದ್ದಲ್ಲ, ಲೇಖಕರಿಗೆ ಉತ್ತೇಜನ ನೀಡುವ ಮೂಲಕ ಕೊಡವ ಸಾಹಿತ್ಯ ಹಾಗೂ ಸಾಹಿತಿಗಳನ್ನು ಬೆಳೆಸಲು ಎಲ್ಲರೂ ಮುಂದೆ ಬರಬೇಕು ಎಂದರು.

ಕೊಡವ ತಕ್ಕ್ ಎಳ್ತ್‍ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಕೊಡವ ಭಾಷೆಯಲ್ಲಿ ಪುಸ್ತಕ ಪ್ರಕಟವಾಗದೆ ಇದ್ದ ಸಂದರ್ಭ ಹುಟ್ಟಿದ ‘ಕೂಟ’ ಇದುವರೆಗೆ ಸರಕಾರದ ಒಂದು ಪೈಸೆ ಅನುದಾನವನ್ನು ಪಡೆಯದೆ ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆಯಲ್ಲಿ ಪ್ರತಿ ತಿಂಗಳಿಗೊಂದು ಪುಸ್ತಕದಂತೆ 157 ಪುಸ್ತಕಗಳನ್ನು ಪ್ರಕಟಿಸಿದೆ ಎಂದರು.

‘ತೇಂಬಾಡ್’ ಪುಸ್ತಕದ ಲೇಖಕಿ ಚೊಟ್ಟೆಯಾಂಡಮಾಡ ಲಲಿತಾ ಕಾರ್ಯಪ್ಪ ಮಾತನಾಡಿ ಪ್ರತಿಯೊಬ್ಬರೂ ಸಾಹಿತ್ಯ ಓದುವದರೊಂದಿಗೆ ಇತರರನ್ನು ಓದಲು ಪ್ರೇರೇಪಿಸಿದಾಗ ಮಾತ್ರ ಸಾಹಿತ್ಯ ಬೆಳೆಯಲು ಸಾಧ್ಯವಾಗುತ್ತದೆ ಎಂದು ಆಶಿಸಿದರು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಾನಿ ಕೈಬಿಲೀರ ಪಾರ್ವತಿ ಭೋಪಯ್ಯ ಹಾಗೂ ಬೆಂಗಳೂರಿನ ಉಧ್ಯಮಿ ಮಂಡೀರ ವಿವೇಕ್ ಚಂಗಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಾಥಮಿಕ, ಪ್ರೌಡಶಾಲೆ, ಕಾಲೇಜು ಸಾರ್ವಜನಿಕವೆಂಬ ಮೂರು ವಿಭಾಗದಲ್ಲಿ ಕೊಡವ ಭಾಷೆಯಲ್ಲಿ ಓದುವ, ಹಾಡುಗಾರಿಕೆ ಹಾಗೂ ಆಶುಭಾಷಣ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು.

ವಿದ್ಯಾಸಂಸ್ಥೆಯ ವಿಧ್ಯಾರ್ಥಿನಿ ಯರು ಪ್ರಾರ್ಥಿಸಿ, ಶಿಕ್ಷಕಿ ಕಾಳಮಂಡ ಜೀವಿತ ಸ್ವಾಗತಿಸಿ ಕೂಟದ ಸಹಕಾರ್ಯದರ್ಶಿ ಬೊಜ್ಜಂಗಡ ನಿತಿನ್ ನಂಜಪ್ಪ ಪರಿಚಯ ಮಾಡಿದರು. ಕೂಟದ ನಿರ್ದೇಶಕ ಕಾಳಿಮಾಡ ಮೋಟಯ್ಯ ನಿರೂಪಿಸಿ, ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ವಂದಿಸಿದರು.