ವೀರಾಜಪೇಟೆ, ಡಿ. 24: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಕಿರಿಯ ಅಭಿಯಂತರ ಎನ್.ಪಿ. ಹೇಮ್‍ಕುಮಾರ್ ಅವರಿಗೆ ರಾಷ್ಟ್ರ ಮಟ್ಟದ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಲಭಿಸಿದ್ದು ಈಚೆಗೆ ಬೆಂಗಳೂರಿನ ಕ್ರೆಸ್ಟ್ ಫೌಂಡೇಶನ್ ಸಂಸ್ಥೆ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗಿದೆ.
ಹೇಮ್‍ಕುಮಾರ್ ಅವರು ಈ ಹಿಂದೆ ಬಳ್ಳಾರಿ ಜಿಲ್ಲೆಯ ಕಮಲಾಪುರ ಪಟ್ಟಣ ಪಂಚಾಯಿತಿಯ ಸಹಾಯಕ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕಸ ವಿಲೇವಾರಿಗೆ ಆದ್ಯತೆ ನೀಡಿ ಘನ ತ್ಯಾಜ್ಯ ವಸ್ತುಗಳ ವಿಲೇವಾರಿಯಲ್ಲಿ ಉತ್ತಮ ನಿರ್ವಹಣೆ, ಪಟ್ಟಣದ ಆಯ್ದ ಭಾಗದಲ್ಲಿ ಪಟ್ಟಣಕ್ಕೆ ಅಂದ ಕಾಣುವ ಅಲ್ಲಿನ ನಿವಾಸಿಗಳಿಗೆ ಹಾಗೂ ಪ್ರವಾಸಿಗರಿಗೆ ಉಪಯೋಗವಾಗುವ ಪಾರ್ಕ್ ನಿರ್ಮಾಣ, ಹಂಪಿ ಪ್ರಾಧಿಕಾರದೊಂದಿಗೆ ಸೇರಿ ಕಮಲಾಪುರದಲ್ಲಿ ಬಯೋ ಗ್ಯಾಸ್ ಉತ್ಪಾದನೆ, ಪಟ್ಟಣದ ರಸ್ತೆ ಅಗಲೀಕರಣದೊಂದಿಗೆ ರಸ್ತೆ ಅಭಿವೃದ್ಧಿ, ಪಟ್ಟಣದ ಆಯ್ದ ಸ್ಥಳಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಕೆ, ಸಮರ್ಪಕ ನೀರು ಸರಬರಾಜು ಸೇರಿದಂತೆ ವಿವಿಧ ಹಲವಾರು ಅಗತ್ಯ ಸೌಲಭ್ಯಗಳನ್ನು ಪಟ್ಟಣದ ಜನತೆಗೆ ಕಲ್ಪಿಸಿದ ಪರಿಣಾಮವಾಗಿ ಇವರ ಉತ್ತಮ ಸೇವಾ ಬದ್ಧತೆಯನ್ನು ಪರಿಗಣಿಸಿ, ಬೆಂಗಳೂರಿನ ಅಂತರ್ರಾಷ್ಟ್ರೀಯ ಇನ್ಸ್‍ಟಿಟ್ಯೂಟ್ ಫಾರ್ ಸೋಷಲ್ ಅಂಡ್ ಎಕನಾಮಿಕ್ಸ್ ರಿಫಾಮ್ರ್ಸ ಸಂಸ್ಥೆ ವತಿಯಿಂದ ಈ ಪ್ರಶಸ್ತಿ ನೀಡಲಾಗಿದೆ.
ಭಾಗಮಂಡಲದ ಬೆಟ್ಟಗೇರಿಯ ನಿವಾಸಿಯಾಗಿರುವ ಹೇಮ್‍ಕುಮಾರ್ ಅವರು ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿರುವದರೊಂದಿಗೆ ಕೊಡಗು ಜಿಲ್ಲಾ ನಗರಾಭಿವೃದ್ಧಿ ಕಾರ್ಯಪಾಲಕ ಪ್ರಭಾರ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.