ಮಡಿಕೇರಿ, ಜ. 1: ಹಿರಿಯ ನಾಗರಿಕರಿಗೆ ನೀಡಲಾಗುವ ಗುರುತಿನ ಚೀಟಿಯನ್ನು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿತರಿಸಿದರು.

ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ವತಿಯಿಂದ ಆನ್‍ಲೈನ್ ಮೂಲಕ ನೀಡಲಾಗುವ ಗುರುತಿನ ಚೀಟಿಯನ್ನು ವಿತರಿಸಿದರು. ಈ ಹಿಂದೆ ಸುಮಾರು 18,621 ಮಂದಿ ಗುರುತಿನ ಚೀಟಿ ನೀಡಲಾಗಿದ್ದು, ಇತ್ತೀಚೆಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದವರಿಗೆ ಹೊಸ ಮಾದರಿಯಲ್ಲಿ ಗುರುತಿನ ಚೀಟಿ ನೀಡಲಾಗುತ್ತಿದೆ. ಗುರುತಿನ ಚೀಟಿಯು ವಿಮಾನ, ರೈಲ್ವೆ, ಬಸ್, ಆದಾಯ ಪ್ರಮಾಣ ಪತ್ರ, ಪಿಂಚಣಿ ಹೀಗೆ ಹಲವು ರಿಯಾಯಿತಿಗೆ ಅನುಕೂಲವಾಗಿದೆ ಎಂದು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ದೇವರಾಜು ಮಾಹಿತಿ ನೀಡಿದರು. ಈ ಸಂದರ್ಭ ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀನಿವಾಸ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಇತರರು ಇದ್ದರು.

ಹಗಲು ಯೋಗಕ್ಷೇಮ: ಆಯ್ದ ಹಿಂದುಳಿದ ಜಿಲ್ಲೆಗಳಲ್ಲಿ ವಯೋವೃದ್ಧರು ಶಾಂತ ಚಿತ್ತರಾಗಿ ಕಾಲ ಕಳೆದು ಚಟುವಟಿಕೆಯಿಂದ ಇರಲು ಸ್ವಯಂ ಸೇವಾ ಸಂಸ್ಥೆಗಳ ಮುಖಾಂತರ ಹಗಲು ಯೋಗಕ್ಷೇಮ ಕೇಂದ್ರಗಳನ್ನು ತೆರೆದು ಉಚಿತ ಉಪಹಾರ ಮನರಂಜನೆ ವೈದ್ಯಕೀಯ ಸೌಲಭ್ಯ ಇನ್ನಿತರೆ ಸವಲತ್ತುಗಳನ್ನು ಒದಗಿಸಲಾಗುತ್ತಿದೆ.

ಹಿರಿಯ ನಾಗರಿಕರ ಸಹಾಯವಾಣಿ: ವಯೋವೃದ್ಧರು ತಾವು ಇರುವ ಸ್ಥಳದಲ್ಲಿಯೇ ತಮಗಾಗಿರುವ ತೊಂದರೆ, ಶೋಷಣೆಯಿಂದ ಹೊರಬರಲು ಅನುಕೂಲವಾಗುವಂತೆ ಜಿಲ್ಲಾ ಕೇಂದ್ರದಲ್ಲಿ ಪೊಲೀಸ್ ಕಮೀಷನರ್ ಅವರ ಸಹಯೋಗದೊಂದಿಗೆ ಗ್ರೀನ್ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯು ಪೆನ್‍ಷನ್ ಲೈನ್, ಮಡಿಕೇರಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉಚಿತ ದೂರವಾಣಿ ಸಂಖ್ಯೆ 1090 ರ ಮೂಲಕ ಈ ಕೇಂದ್ರದಲ್ಲಿ ಹೆಸರು ನೋಂದಾಯಿಸಿ ಸೇವೆ ಪಡೆಯಬಹುದಾಗಿದೆ.