ಮಡಿಕೇರಿ, ಜ. 1: ಬೆಂಗಳೂರಿನ ಕೆ.ಪಿ.ರೋಡ್ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಕೊಡಗು ಜಿಲ್ಲೆಯ ಪ್ರಕೃತ್ತಿ ವಿಕೋಪದ 10 ಸಂತ್ರಸ್ತರಿಗೆ ತಲಾ 10 ಸಾವಿರದಂತೆ ರೂ.1 ಲಕ್ಷ ಆರ್ಥಿಕ ನೆರವು ನೀಡಲಾಯಿತು.
ಮಕ್ಕಂದೂರಿನ ಕೆ.ಎಂ. ಅರವಿಂದ್, ಕೆ.ಟಿ.ಪ್ರಸನ್ನ, ಕೆ.ಜಿ. ಸುನೀಲ್, ಎ.ಪಿ.ಪ್ರಸಾದ್, ಬಿ.ಎಸ್.ಮೀನಾಕ್ಷಿ, ಹೆಬ್ಬಟ್ಟಗೇರಿಯ ಎ.ಪಿ.ಜಯಲಕ್ಷ್ಮೀ, ಮಡಿಕೇರಿಯ ಎ.ಎಸ್.ರಾಧ, ಎನ್.ಕೆ.ಚಂದ್ರಶೇಖರ್, ಮೇಕೇರಿಯ ಕೆ.ಆರ್.ನಾರಾಯಣ್, ಹಿಲ್ಡಾ ಜಾಕ್ವೇಸ್ ಅವರಿಗೆ ತಲಾ 10 ಸಾವಿರ ರೂ.ಗಳ ನೆರವು ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಕೆ.ಪಿ.ರೋಡ್ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಚಂದ್ರಶೇಖರ್, ಮೂರು ತಿಂಗಳಿನಿಂದ ಆಯ್ದ ಸಂತ್ರಸ್ತರಿಗೆ ಸಂಘದ ವತಿಯಿಂದ ಪ್ರತೀ ತಿಂಗಳು ತಲಾ 10 ಸಾವಿರ ರೂ.ಗಳಂತೆ 1 ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ. ಮುಂದಿನ ತಿಂಗಳಿನಲ್ಲಿಯೂ ಈ ಆರ್ಥಿಕ ನೆರವು ಮುಂದುವರೆಯಲಿದೆ. ಪ್ರಕೃತ್ತಿ ವಿಕೋಪ ಸಂತ್ರಸ್ತರಿಗೆ ಈ ಮೂಲಕ ಸಂಘ ತನ್ನ ನೆರವು ನೀಡಲು ಮುಂದಾಗಿದೆ ಎಂದರು.
ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ಜೀವನ್ ಕುಶಾಲಪ್ಪ ಮಾತನಾಡಿ, ಕೊಡಗಿನಲ್ಲಿ ಸಂಭವಿಸಿದ ನಿಸರ್ಗ ಪ್ರಕೋಪದಲ್ಲಿ ಮನೆ ಕಳೆದುಕೊಂಡು ನೊಂದಿರುವ ಸಂತ್ರಸ್ತರಿಗೆ ಸಾಧ್ಯವಾದ ನೆರವು ನೀಡಲು ರಾಜ್ಯದ ವಿವಿಧ ಔಷಧಿ ವ್ಯಾಪಾರಸ್ಥರ ಸಂಘಗಳು ಮುಂದೆ ಬಂದಿದೆ. ಕೆ.ಪಿ.ರಸ್ತೆಯ ಔಷಧಿ ವ್ಯಾಪಾರಿಗಳ ಸಂಘ ವಿನೂತನವಾಗಿ ಪ್ರತೀ ತಿಂಗಳೂ ಸಂತ್ರಸ್ತರನ್ನು ಗುರುತಿಸುತ್ತಾ ಸೂಕ್ತ ಸಹಾಯಕ್ಕೆ ಮುಂದಾಗಿರುವದು ಶ್ಲಾಘನೀಯ ಎಂದರು. ಔಷಧಿ ವ್ಯಾಪಾರಿಗಳ ಸಂಘದ ಜಿಲ್ಲಾ ಮಾಜಿ ಕಾರ್ಯದರ್ಶಿ ವಸಂತ್, ಅಂಬೆಕಲ್ ಕುಶಾಲಪ್ಪ, ಕೆ.ಪಿ.ರೋಡ್ ಔಷಧಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಹಾಜರಿದ್ದರು.