ಮಡಿಕೇರಿ, ಜ. 2: ಶಿಕ್ಷಣ ಸಂಸ್ಥೆಗಳಲ್ಲಿ ಜರುಗಿದ ವಿವಿಧ ಕಾರ್ಯಕ್ರಮಗಳೊಂದಿಗೆ, ಕೊಡಗಿನ ವಿದ್ಯಾರ್ಥಿಗಳು ತಮ್ಮ ಸಾಧನೆ ತೋರಿದ್ದಾರೆ. ವಿದ್ಯಾಲಯಗಳ ವಾರ್ಷಿಕೋತ್ಸವ, ಕ್ರೀಡಾ ಚಟುವಟಿಕೆ ಇತ್ಯಾದಿಯಲ್ಲಿ ಮಕ್ಕಳು ತೊಡಗಿಸಿಕೊಂಡಿದ್ದರು.ಚೇರಂಬಾಣೆ: ಅರುಣ ಪದವಿಪೂರ್ವ ಕಾಲೇಜು ಚೇರಂಬಾಣೆಯ 9ನೇ ತರಗತಿ ವಿದ್ಯಾರ್ಥಿಗಳಾದ ಕೆ.ಎಲ್. ಕೃಷ್ಣ ಮತ್ತು ವರ್ಷಿತ್‍ಕುಮಾರ್ ಇನ್ಸ್‍ಸ್ಪೈರ್ ಅವಾಡ್ ಮಾನ್‍ಕ್ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಭಾಗವಹಿಸಿದ್ದರು.
ಕೃಷ್ಣ ವಿಭಾಗಿಯ ಮಟ್ಟದಲ್ಲಿ ಹಾಗೂ ವರ್ಷಿತ್‍ಕುಮಾರ್ ಎ.ಆರ್. ರಾಜ್ಯಮಟ್ಟದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ವಿಜೇತರಾಗಿದ್ದಾರೆ. ತಾಂತ್ರಿಕ ಸಲಹೆಗಾರರಾಗಿ ಬಿ.ಡಿ. ಗಣೇಶ್ ಭಾಗವಹಿಸಿದ್ದರು.ವಾಲ್ನೂರು-ತ್ಯಾಗತ್ತೂರು: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ವಿದ್ಯಾರ್ಥಿನಿಯರು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಗುಡ್ಡೆಹೊಸೂರಿನಲ್ಲಿ ಉಚಿತ ದಂತ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದರು. ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರ ನಡುವೆ ಗೊಂದಲವಿದ್ದ ಕಾರಣ ಅಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸಿದರು.
ಕೂರ್ಗ್ ಇನ್‍ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಕಾಲೇಜಿನ ವೈದ್ಯರ ಸಹಾಯದೊಂದಿಗೆ ಉಚಿತ ದಂತ ವೈದ್ಯಕೀಯ ತಪಾಸಣಾ ಶಿಬಿರವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾಲ್ನೂರು-ತ್ಯಾಗತ್ತೂರಿನಲ್ಲಿ ಹಮ್ಮಿಕೊಂಡಿದ್ದರು.
ಶಿಬಿರದ ಪೂರ್ಣ ಮಾಹಿತಿಯನ್ನು ಡಾ. ಭಾವನ ವಿದ್ಯಾರ್ಥಿಗಳಿಗೆ ತಿಳಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷೆ ಬಿ.ಕೆ. ಲಕ್ಷ್ಮಿ, ಗ್ರಾ.ಪಂ. ಅಧ್ಯಕ್ಷೆ ನಾಗರತ್ನ, ಉಪಾಧ್ಯಕ್ಷ ಸತೀಶ್ ಮೊದಲಾದವರು ಹಾಜರಿದ್ದರು.ಕುಶಾಲನಗರ: ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಹೆಬ್ಬಾಲೆ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಎನ್‍ಎಸ್‍ಎಸ್ ಶಿಬಿರದ ಸಮಾರೋಪ ಸಮಾರಂಭ ನೆರವೇರಿತು.
ಕಾಲೇಜು ಪ್ರಾಂಶುಪಾಲ ಪ್ರೊ. ಹೆಚ್.ಬಿ. ಲಿಂಗಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ಡಯಟ್‍ನ ಉಪನ್ಯಾಸಕ ಕೆ.ವಿ. ಸುರೇಶ್ ಮಾತನಾಡಿ, ವಿದ್ಯಾರ್ಥಿಗಳು ನಕಾರಾತ್ಮಕ ಚಿಂತನೆಗಳಿಂದ ದೂರವಿರುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆಂಚಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಮಯಪ್ರಜ್ಞೆ ಅಳವಡಿಸಿಕೊಳ್ಳಬೇಕಿದೆ ಎಂದರು. ಹೆಬ್ಬಾಲೆಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಮೇಶ್, ಶಿಬಿರಾಧಿಕಾರಿ ಪುಟ್ಟುರಾಜು ಇದ್ದರು.
ಶಿಬಿರಾರ್ಥಿ ಸಾಗರ್ ನಿರೂಪಿಸಿದರು, ವಂದನಾ ವರದಿ ವಾಚಿಸಿದರು, ಟಿ.ಎಂ. ಸುಧಾಕರ್ ವಂದಿಸಿದರು.ಸೋಮವಾರಪೇಟೆ: ಇಲ್ಲಿನ ಕ್ರಿಯೇಟಿವ್ ಅಕಾಡೆಮಿ ಶಾಲೆಯ ಪುಟಾಣಿಗಳಿಗೆ ಮಾರುಕಟ್ಟೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಶಾಲೆಯ ಪುಟಾಣಿಗಳು ಬ್ಯಾಗ್ ಹಿಡಿದು ಸೋಮವಾರಪೇಟೆ ಪಟ್ಟಣದ ಅಂಗಡಿಗಳಲ್ಲಿ ತರಕಾರಿ, ದಿನಸಿ ಸೇರಿದಂತೆ ಹಣ್ಣು ಹಂಪಲುಗಳನ್ನು ಖರೀದಿಸಿದರು. ಎಳೆಯ ಮಕ್ಕಳಿಗೆ ಮಾರುಕಟ್ಟೆ ಜ್ಞಾನವನ್ನು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಕ್ಕಳು ಉತ್ಸಾಹದಿಂದಲೇ ವಿವಿಧ ವಸ್ತು, ಹಣ್ಣು ಹಂಪಲುಗಳನ್ನು ಖರೀದಿಸಿದರು. ಪ್ಲಾಸ್ಟಿಕ್ ಬಳಕೆ ತಡೆಗಟ್ಟಿ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‍ಗಳನ್ನು ಬಳಸುವಂತೆ ಮಕ್ಕಳಿಗೆ ಕಿವಿಮಾತು ಹೇಳಿದ್ದರಿಂದ, ಮನೆಯಿಂದಲೇ ಬಟ್ಟೆ ಕೈಚೀಲಗಳನ್ನು ತಂದು ತಮಗಿಷ್ಟವಾದುದನ್ನು ಖರೀದಿಸಿದರು.
ಈ ಸಂದರ್ಭ ಅಕಾಡೆಮಿಯ ಜಂಟಿ ಮ್ಯಾನೇಜಿಂಗ್ ಟ್ರಸ್ಟಿ ಮಹೇಶ್, ಮುಖ್ಯ ಶಿಕ್ಷಕಿ ದಿವ್ಯ ಜ್ಯೋತಿ, ಸಹ ಶಿಕ್ಷಕಿಯರಾದ ಸೌಮ್ಯ, ತೇಜಸ್ವಿನಿ, ಲತಾ, ರೀಟಾ, ಚಂದನ ಉಪಸ್ಥಿತರಿದ್ದು, ಮಾಹಿತಿ ಒದಗಿಸಿದರು.
ಶನಿವಾರಸಂತೆ, ಜ. 2: ಮಾನವ ಮದ್ಯ ಹಾಗೂ ಮಾದಕ ವಸ್ತುಗಳ ವ್ಯಸನಿಯಾದರೆ ಜೀವನವೇ ಸರ್ವನಾಶವಾಗುತ್ತದೆ ಎಂದು ಪಿಎಸ್‍ಐ ಹೆಚ್.ಎಂ. ಮರಿಸ್ವಾಮಿ ಅಭಿಪ್ರಾಯಪಟ್ಟರು. ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಎಸ್‍ಎಸ್‍ಎಫ್ ಸೋಮವಾರಪೇಟೆ ವಲಯ ವತಿಯಿಂದ ನಡೆದ ಮದ್ಯ ಹಾಗೂ ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ಮಾತನಾಡಿ, ಇಂದಿನ ಯುವ ಜನಾಂಗ ಮದ್ಯ ಮಾದಕ ವಸ್ತುಗಳ ದಾಸರಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಎಸ್‍ಎಸ್‍ಎಫ್ ಸೋಮವಾರಪೇಟೆ ವಲಯ ಅಧ್ಯಕ್ಷ ಶಾಫಿ ಸಹದಿ ಮಾತನಾಡಿದರು. ಎಸ್‍ಎಸ್‍ಎಫ್ ಜಿಲ್ಲಾ ನಾಯಕ ಅಬ್ದುಲ್ ಅಝೀಜ್ ಸಖಾಫಿ, ರಹೀಮ್ ಹೊಸತೋಟ, ಮಹಮ್ಮದ್ ಅಲಿ ಸಖಾಪಿ, ಹಸೈನಾರ್ ಕಾಜೂರು, ಸಾಧಿಕ್ ಕರ್ಕಳ್ಳಿ, ಫಾರೂಕ್, ಬಾಸಿತ್, ಸುಲ್ತಾನ್, ಮಹಮ್ಮದ್, ಪೊಲೀಸ್ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.