ಸೋಮವಾರಪೇಟೆ, ಜ.1: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಗರಿಷ್ಠ ಸೇವಾವಧಿಯನ್ನು 60 ವರ್ಷಕ್ಕೆ ಸೀಮಿತಗೊಳಿಸಿದ್ದರೂ ಸಹ ಸೋಮವಾರಪೇಟೆ ತಾಲೂಕು ಕಂದಾಯ ಇಲಾಖೆಯಲ್ಲಿ 60ರ ಗಡಿದಾಟಿದ 12 ಮಂದಿ ಇಂದಿಗೂ ಕರ್ತವ್ಯದಲ್ಲಿ ಮುಂದುವರೆದಿ ರುವದು ಕಂಡುಬಂದಿದೆ.

ತಾಲೂಕು ಕಚೇರಿಯಲ್ಲಿ ಈರ್ವರು, ಸುಂಟಿಕೊಪ್ಪ ನಾಡಕಚೇರಿಯಲ್ಲಿ ಮೂವರು ಸೇರಿದಂತೆ ಕುಶಾಲನಗರ, ಕೊಡ್ಲಿಪೇಟೆ, ಶನಿವಾರಸಂತೆ ನಾಡ ಕಚೇರಿಗಳಲ್ಲಿ ತಲಾ ಈರ್ವರು, ಶಾಂತಳ್ಳಿಯಲ್ಲಿ ಓರ್ವರು ಇಂದಿಗೂ ಸರ್ಕಾರಿ ಸೇವೆಯಲ್ಲಿದ್ದಾರೆ.ಬಹುತೇಕ ಇಲಾಖೆಗಳಲ್ಲಿ 60 ವರ್ಷ ತುಂಬುತ್ತಿ ದ್ದಂತೆ ಅಧಿಕಾರಿ ಹಾಗೂ ಸಿಬ್ಬಂದಿ ನಿವೃತ್ತರಾಗುತ್ತಾರೆ. ಆದರೆ ಸೋಮವಾರಪೇಟೆ ತಾಲೂಕಿನ ಕಂದಾಯ ಇಲಾಖೆಯಲ್ಲಿ ಮಾತ್ರ 60 ವರ್ಷ ತುಂಬಿದವರಿಂದ ಹಿಡಿದು 75 ವರ್ಷ ದಾಟಿದವರೂ ಸೇವೆಯಲ್ಲಿದ್ದಾರೆ.

ಕಂದಾಯ ಇಲಾಖೆಯಲ್ಲಿ ಸಾಕಷ್ಟು ಕೆಲಸಕಾರ್ಯ ಗಳಿದ್ದು, ಅನುಭವಿಗಳನ್ನೇ ಮುಂದುವರೆಸಿದರೆ ಕೆಲಸವೂ ಸುಲಭ ಎಂದು ಅಧಿಕಾರಿಗಳು ಮನಗಂಡಿದ್ದು, ನಿವೃತ್ತಿಯಾದ ನಂತರವೂ ಸಹ ಅಕ್ರಮವಾಗಿ ಸರ್ಕಾರದ ಸೇವೆಯಲ್ಲಿ ಮುಂದುವರೆಯುವಂತೆ ಮಾಡಿರುವದು ಎಷ್ಟು ಸರಿ ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.

ತಮ್ಮ ಕೆಳಗಿನ ಸಿಬ್ಬಂದಿಗಳು 60 ವರ್ಷ ತುಂಬಿದರೂ ಸಹ ನಿವೃತ್ತರಾಗದೇ ಅದೇ ಕೆಲಸದಲ್ಲಿ ಉಳಿದುಕೊಂಡಿ ರುವದರಲ್ಲಿ ಹಿರಿಯ ಅಧಿಕಾರಿಗಳ ಕೃಪಾಶೀರ್ವಾದವೂ ಇದೆ ಎಂಬ ಆರೋಪಗಳು ಕೇಳಿಬಂದಿವೆ.

ನಿವೃತ್ತಿಯ ವಯಸ್ಸು ದಾಟಿದ ನಂತರವೂ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆ ಪ್ರಶ್ನಿಸಿದ ಸಂದರ್ಭ ಪ್ರತಿಕ್ರಿಯೆ ನೀಡಿರುವ ತಾಲೂಕು ತಹಶೀಲ್ದಾರ್ ಮಹೇಶ್, 12 ಮಂದಿ ನಿವೃತ್ತಿಯ ವಯಸ್ಸು ದಾಟಿರುವವರು ಇದ್ದಾರೆ. ಇವರಿಗೆ ನಿವೃತ್ತಿ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವದಾಗಿ ತಿಳಿಸಿದ್ದಾರೆ.

ಕ್ರಮಕ್ಕೆ ಆಗ್ರಹ : ಶನಿವಾರಸಂತೆ ಕಂದಾಯ ಇಲಾಖಾ ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿ 60 ವರ್ಷ ಕಳೆದಿದ್ದರೂ ಇಂದಿಗೂ ಸೇವೆಯಲ್ಲಿ ಮುಂದುವರೆದಿದ್ದಾರೆ. ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಸ್ಪಂದಿಸದೇ ತೊಂದರೆ ನೀಡುತ್ತಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು, ತಾಲೂಕು ತಹಶೀಲ್ದಾರ್, ಜಿಲ್ಲಾಧಿಕಾರಿ ಸೇರಿದಂತೆ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ದೂರು ನೀಡಿದ್ದಾರೆ.

ಶಾಲಾ ದಾಖಲಾತಿಯ ಪ್ರಕಾರ 10.12.1957ರಲ್ಲಿ ಜನಿಸಿರುವ ಬಗ್ಗೆ ನಮೂದಾಗಿದ್ದು, ನಿವೃತ್ತಿಯ ವಯಸ್ಸೂ ದಾಟಿದೆ. ಆದರೂ ಸಹ ಸರ್ಕಾರಿ ಕೆಲಸದಲ್ಲಿ ಮುಂದುವರೆಯುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದ್ದಾರೆ.

-ವಿಜಯ್