ಕುಶಾಲನಗರ, ಜ. 1: ಕುಶಾಲನಗರ ಪಟ್ಟಣದಲ್ಲಿ ಬಡಾವಣೆಗಳಲ್ಲಿ ಉದ್ಯಾನವನಕ್ಕೆ ಮೀಸಲಾಗಿರಿಸಿದ್ದ ಜಾಗ ಹಲವೆಡೆ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಮಾರಾಟ ಮಾಡಿದ್ದು ಸಾರ್ವಜನಿಕ ಉದ್ದೇಶಕ್ಕೆ ಮೀಸಲಾಗಿರಿಸಿರುವ ಪಾರ್ಕ್ಗಳನ್ನು ನಿರ್ವಹಣೆ ಮಾಡುವಲ್ಲಿ ಆಡಳಿತ ವಿಫಲ ವಾಗಿದೆ. ಈ ಮೂಲಕ ಸರಕಾರದ ಅಧೀನಕ್ಕೆ ಒಳಪಟ್ಟ ಕೋಟಿಗಟ್ಟಲೆ ಬೆಲೆಬಾಳುವ ಎಕರೆಗಟ್ಟಲೆ ಜಾಗಗಳು ಖಾಸಗಿ ವ್ಯಕ್ತಿಗಳ ಪರಭಾರೆಯಾಗು ತ್ತಿರುವದು ಇತ್ತೀಚಿನ ಬೆಳವಣಿಗೆಯಾಗಿದೆ.
ಪಟ್ಟಣದ ಸುಮಾರು 36 ಕ್ಕೂ ಅಧಿಕ ಬಡಾವಣೆಗಳಲ್ಲಿ ಪಾರ್ಕ್, ರಸ್ತೆ ಮತ್ತು ಸಾರ್ವಜನಿಕ ಉಪಯೋಗ ಕ್ಕೋಸ್ಕರ ಮೀಸಲಿರಿಸಿದ್ದ ಜಾಗಗಳು ಬಹುತೇಕ ಮಾಯವಾಗುತ್ತಿವೆ. ರಸ್ತೆ, ಉದ್ಯಾನವನ, ಜಾಗಗಳಿಗೆ ದಾನ ನೀಡಿದ ದಾಖಲೆಗಳು ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಲಭ್ಯವಿಲ್ಲ ಎನ್ನುವ ಮಾಹಿತಿ ಹೊರ ಬಿದ್ದಿದೆ. ಇನ್ನೂ ಅನೇಕ ಬಡಾವಣೆಗಳ ಮೂಲ ದಾಖಲೆಗಳು ಮತ್ತು ಮಾಲೀಕರ ಬಳಿಯಿರುವ ದಾಖಲೆ ಗಳು ಒಂದಕ್ಕೊಂದು ಹೊಂದಾಣಿಕೆ ಯಾಗುತ್ತಿಲ್ಲ. ಬಹುತೇಕ ನಕಲಿ ದಾಖಲೆಗಳ ಮೂಲಕ ಬಡಾವಣೆ ಗಳನ್ನು ಅಭಿವೃದ್ಧಿಪಡಿಸುವ ದರೊಂದಿಗೆ ನಿವೇಶನಗಳನ್ನು ಮಾರಾಟ ಮಾಡುತ್ತಿರುವ ಭೂದಂಧೆ ವಹಿವಾಟು ಅಧಿಕಗೊಂಡಿದೆ. ಈ ಮೂಲಕ ಸಾಮಾನ್ಯ ನಾಗರಿಕರಿಗೆ ವಂಚನೆಯೊಂದಿಗೆ ಸರಕಾರದ ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿ ಪರರ ಪಾಲಾಗುತ್ತಿದೆ. ಕುಶಾಲನಗರ ಬೈಚನಹಳ್ಳಿ ಬಳಿಯ ಬಡಾವಣೆಯ ವಸತಿ ವಿನ್ಯಾಸದಲ್ಲಿ ಒಟ್ಟು 49 ನಿವೇಶನಗಳ ಪೈಕಿ ಶೇ 60 ರಷ್ಟು ನಿವೇಶನಗಳನ್ನು ಮಾರಾಟಕ್ಕೆ ಬಿಡುಗಡೆಗೊಳಿಸಿದ್ದರೂ ಬಹುತೇಕ ನಿವೇಶನಗಳು ನಿಯಮ ಬಾಹಿರವಾಗಿ ಮಾರಾಟಗೊಂಡಿವೆ. ಬಹುತೇಕ ಬಡಾವಣೆಗಳ ಅಧಿಕೃತ ವಿನ್ಯಾಸ, ನಕ್ಷೆ, ಕಡತ, ಕಚೇರಿಯಲ್ಲಿ ಲಭ್ಯವಿರುವದಿಲ್ಲ. ಅಸಲಿ ದಾಖಲೆ ಗಳು ಕಚೇರಿಯಲ್ಲಿ ನಾಪತ್ತೆ ಯಾಗಿರುವ ಬಗ್ಗೆ ಅಧಿಕಾರಿಗಳು ಷರಾ ನೀಡಿದ್ದು ಕಂಡುಬಂದಿದೆ. ನೀಲಿನಕ್ಷೆ ಲಭ್ಯವಿದ್ದರೂ ರಾಜ್ಯಪಾಲರ ಹೆಸರಿನಲ್ಲಿ ರಸ್ತೆ ಮತ್ತು ಉದ್ಯಾನ ವನಕ್ಕೆ ಕಾಯ್ದಿರಿಸಲಾಗಿದ್ದ ಎಕರೆ ಗಟ್ಟಲೆ ಜಾಗ ಅಧಿಕಾರಿಗಳೇ ನಿಯಮ ಬಾಹಿರವಾಗಿ
(ಮೊದಲ ಪುಟದಿಂದ) ಬಡಾವಣೆ ಮಾಲೀಕರಿಗೆ ವಾಪಾಸ್ ನೀಡಿರುವದು ಸರ್ವೆ ನಂ 192/1 ಮತ್ತು 192/2 ರಲ್ಲಿ ಕಾಣಬಹುದು.
ಬಹುತೇಕ ಬಡಾವಣೆಯ ಮಾಲೀಕರು ಪಂಚಾಯಿತಿಗೆ ದಾನಪತ್ರ ನೀಡಿದ್ದು ಇವುಗಳು ಕೂಡ ಕಛೇರಿಯಲ್ಲಿ ನಾಪತ್ತೆಯಾಗಿವೆ ಎನ್ನುವ ಬಗ್ಗೆ ತಿಳಿದುಬಂದಿದೆ. ಮೂಲ ಕಡತಗಳ ದಾಖಲೆಗಳನ್ನು ಸಮರ್ಪಕವಾಗಿ ಸಂರಕ್ಷಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ. ಸರ್ವೆ ನಂ 146/1, 146/1ಡಿ1, 59/ಸಿ ಮತ್ತು ಹಲವೆಡೆ ರಸ್ತೆಗೆ, ಉದ್ಯಾನವನಕ್ಕೆ ಕಾದಿರಿಸಿದ್ದ ಎಕರೆಗಟ್ಟಲೆ ಜಾಗದ ವಸತಿ ವಿನ್ಯಾಸ, ಕಚೇರಿಯಿಂದ ನಾಪತ್ತೆಯಾಗಿರುವದು ಅಧಿಕಾರಿಗಳಿಂದ ದೊರೆತ ಮಾಹಿತಿ ಪ್ರಕಾರ ತಿಳಿದುಬಂದಿದೆ.
ಇನ್ನು ಕೆಲವೆಡೆ ವಸತಿ ವಿನ್ಯಾಸದ ಮೂಲ ಪ್ರತಿ ಬದಲು ನಕಲು ಪ್ರತಿ ಕಚೇರಿಯಲ್ಲಿ ಕಂಡುಬರುತ್ತಿರುವದು ಅಧಿಕಾರಿಗಳು ಮತ್ತು ಕೆಲವು ಬಡಾವಣೆಗಳ ಮಾಲೀಕರ ನಡುವೆ ಸಂಶಯವನ್ನು ಹುಟ್ಟುಹಾಕುತ್ತಿದೆ. ಇದರೊಂದಿಗೆ ಪಟ್ಟಣದಲ್ಲಿ ಸಿಎ ನಿವೇಶನಗಳು ಕೂಡ ನಿಯಮಬಾಹಿರವಾಗಿ ಬಳಕೆಯಾಗಿರುವದು ಕಂಡುಬಂದಿದೆ.
ಪಟ್ಟಣದ ಕಾವೇರಿ ಬಡಾವಣೆಯಲ್ಲಿ ಈ ಹಿಂದೆ ರೂ. 20 ಲಕ್ಷ ವೆಚ್ಚದಲ್ಲಿ ಉದ್ಯಾನವನವನ್ನು ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಲೋಕಾರ್ಪಣೆ ಮಾಡಿದ್ದರು. ಪಟ್ಟಣದಲ್ಲಿ ನಾಗರಿಕರಿಗೆ ವಾಯುವಿಹಾರಕ್ಕೆ ತೆರಳಲು ನಿರ್ಮಾಣವಾದ ಈ ಉದ್ಯಾನವನದಲ್ಲಿ ಹೂವಿನ ಗಿಡಗಳು, ಅಲಂಕಾರ ಗಿಡಗಳು ಕಂಡುಬರುತ್ತಿದ್ದು ಇತ್ತೀಚಿನ ದಿನಗಳಲ್ಲಿ ಇದರ ನಿರ್ವಹಣೆಯಿಲ್ಲದೆ ಎಲ್ಲವೂ ಒಣಗಿ ಹೋಗುತ್ತಿರುವ ದೃಶ್ಯ ಕಂಡುಬಂದಿದೆ.
ನೀರಿನ ಕೊರತೆಯಿಂದ ಗಿಡಗಳಿಗೆ ಹಾನಿಯಾಗುತ್ತಿದ್ದು ಇನ್ನೊಂದೆಡೆ ಹುಲ್ಲು ಬೆಳೆದು ವಿಷಕಾರಿ ಜಂತುಗಳು ಸೇರಿರುವ ಆತಂಕ ಎದುರಾಗಿದೆ. ಉದ್ಯಾನವನದ ಒಳಭಾಗದಲ್ಲಿ ವಿದ್ಯುತ್ ಸರಬರಾಜು ಪೆಟ್ಟಿಗೆ ಅಳವಡಿಸಲಾಗಿದ್ದು ಇದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಕೆಲವು ಪುಂಡ ಹುಡುಗರು ಈ ಉದ್ಯಾನವನದಲ್ಲಿ ಧೂಮಪಾನ, ಮದ್ಯಪಾನ ಮಾಡುವದರೊಂದಿಗೆ ಅಳವಡಿಸಿರುವ ಆಸನಗಳಿಗೆ ಹಾನಿಯುಂಟು ಮಾಡಿರುವದು ಕಂಡುಬಂದಿದೆ.
2008 ರಲ್ಲಿ ಕುಶಾಲನಗರ ನಗರ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದರೂ ಪಟ್ಟಣ ಪಂಚಾಯಿತಿ ಮತ್ತು ‘ಕೂಡ’ ನಡುವೆ ಸಮನ್ವಯದ ಕೊರತೆಯೊಂದಿಗೆ ಪಟ್ಟಣದಲ್ಲಿ ಬೇಕಾಬಿಟ್ಟಿ ಬಡಾವಣೆಗಳು ತಲೆ ಎತ್ತುವದರೊಂದಿಗೆ ಭೂಮಾಫಿಯ ತನ್ನ ಅಸ್ತಿತ್ವವನ್ನು ಮೆರೆಯುತ್ತಿರುವದು ಬೆಳವಣಿಗೆಯಾಗಿದೆ. ಸರಕಾರಿ ನಿಯಮಗಳನ್ನು ಉಲ್ಲಂಘಿಸುವದರೊಂದಿಗೆ ಪಟ್ಟಣದಲ್ಲಿ ನಿಯಮಬಾಹಿರ, ಅಕ್ರಮ ಕಟ್ಟಡಗಳು ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ತೊಡಕುಂಟಾಗುವದು ನಿಶ್ಚಿತ ಎನ್ನಲಾಗಿದೆ.
ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಸರಕಾರಿ ಜಾಗದ ಸಂರಕ್ಷಣೆಯೊಂದಿಗೆ ಪಟ್ಟಣದ ಪ್ರತಿ ಬಡಾವಣೆಯಲ್ಲಿ ಉದ್ಯಾನವನ ನಿರ್ವಹಣೆ, ಸಾರ್ವಜನಿಕ ಹಿತದೃಷ್ಟಿ ಹಿನ್ನಲೆಯಲ್ಲಿ ಕಾಯ್ದಿರಿಸಿರುವ ಸರಕಾರಿ ಜಾಗಗಳ ರಕ್ಷಣಾ ಕಾರ್ಯ ಸಮರ್ಪಕವಾಗಿ ನಡೆಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
-ವರದಿ : ಚಂದ್ರಮೋಹನ್