ಮಡಿಕೇರಿ, ಜ. 2: ವಿದ್ಯಾರ್ಥಿಗಳಿಗೆ ಶಾಸನ ಸಭೆಯ ಕಲಾಪವನ್ನು ಪರಿಚಯಿಸುವ ನಿಟ್ಟಿನಲ್ಲಿ ಸಂಸದೀಯ ವ್ಯವಹಾರಗಳ ಇಲಾಖೆ ಮತ್ತು ಕೊಡಗು ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ (ಡಿಎಸ್‍ಇಆರ್‍ಟಿ) ಇವರ ಸಂಯುಕ್ತಾಶ್ರಯದಲ್ಲಿ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ನಡೆಯಿತು.

ಜಿಲ್ಲೆಯ ಮೂರು ತಾಲೂಕುಗಳ 60 ಪ್ರೌಢಶಾಲಾ ವಿದ್ಯಾರ್ಥಿಗಳು ಯುವ ಸಂಸತ್ ಸ್ಪರ್ಧೆಯಲ್ಲಿ ಭಾವಹಿಸಿದ್ದರು. ಯುವ ಸಂಸತ್‍ನಲ್ಲಿ ಸಭಾಧ್ಯಕ್ಷರು, ಆಡಳಿತ ಪಕ್ಷ, ವಿರೋಧ ಪಕ್ಷಗಳಾಗಿ ವಿದ್ಯಾರ್ಥಿಗಳು ಹಲವು ಮಹತ್ವದ ವಿಚಾರಗಳ ಕುರಿತು ಕಲಾಪ ನಡೆಸಿದ್ದು ಆಕರ್ಷಣೀಯವಾಗಿತ್ತು.

ಯುವ ಸಂಸತ್‍ನಲ್ಲಿ ವಿದ್ಯಾರ್ಥಿಗಳು ಶೂನ್ಯ ವೇಳೆ ಚುಕ್ಕೆ ಗುರುತಿನ ಪ್ರಶ್ನೆ, ಚುಕ್ಕೆ ಗುರುತಿಲ್ಲದ ಪ್ರಶ್ನೆ ಹೀಗೆ ಹತ್ತು ಹಲವು ಶಾಸನ ಸಭೆಯ ನಿಯಮಗಳಂತೆ ಚರ್ಚೆ ನಡೆಸಿದ್ದು ವಿಶೇಷವಾಗಿತ್ತು.

ಜಿಲ್ಲಾ ಮಟ್ಟದ ಯುವ ಸಂಸತ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ 5 ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಇವರಲ್ಲಿ ಒಬ್ಬರನ್ನು ರಾಜ್ಯಮಟ್ಟದಲ್ಲಿ ನಡೆಯುವ ಯುವ ಸಂಸತ್ ಸ್ಪರ್ಧೆಗೆ ಆಯ್ಕೆ ಮಾಡಿ ಕಳುಹಿಸಲಾಗುವದು ಎಂದು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್ ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಇತರರು ಇದ್ದರು.